ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಗಾರು ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶದ ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮುಖ್ಯವಾಗಿ ಸಂಗಮ್ನಗರ ಎಂದೇ ಕರೆಯಲ್ಪಡುವ ಹಾಗೂ ಮಹಾ ಕುಂಭಮೇಳ ನಡೆದ ಪ್ರಯಾಗ್ರಾಜ್ನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೇ ವಾರಣಾಸಿ ಸೇರಿದಂತೆ ಅನೇಕ ನಗರಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ.
ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಗಂಗಾ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಪ್ರಯಾಗ್ರಾಜ್ ನಗರದ ಸಲೋರಿ, ರಾಜಪುರ, ದಾರಗಂಜ್, ಬಘಾಡಾ ಮುಂತಾದ ಪ್ರದೇಶಗಳು ಮುಳುಗಿಹೋಗಿವೆ.
ಅದೇ ಸಮಯದಲ್ಲಿ, ಮಿರ್ಜಾಪುರ, ವಾರಣಾಸಿ, ಅಯೋಧ್ಯೆ, ಚಂದೌಲಿ, ಬಲ್ಲಿಯಾದ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಅಲ್ಲದೇ ಲಕ್ನೋ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್, ಬಹ್ರೈಚ್ ಮತ್ತು ಅಂಬೇಡ್ಕರ್ ನಗರದಲ್ಲೂ ಭಾರೀ ಮಳೆ ಮುಂದುವರಿದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.