ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿಯ ಮೇಘಸ್ಫೋಟದಲ್ಲಿ 28 ಕೇರಳದ ಪ್ರವಾಸಿಗರು ನಾಪತ್ತೆಯಾಗಿದ್ದರು. ಇದೀಗ ಅವರನ್ನು ಪತ್ತೆಹಚ್ಚಲಾಗಿದ್ದು, ಅವರೆಲ್ಲರೂ ಸುರಕ್ಷಿತ ಆಗಿದ್ದಾರೆ.
ಕೇರಳದ ಸ್ಥಳೀಯರನ್ನು ಒಳಗೊಂಡ 28 ಸದಸ್ಯರ ಪ್ರವಾಸಿಗರ ಗುಂಪು ಮಂಗಳವಾರ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಣ್ಣು ಕುಸಿತದ ನಂತರ ಕಾಣೆಯಾಗಿತ್ತು. ಪ್ರವಾಸಿಗರು ಕೊನೆಯದಾಗಿ ಉತ್ತರಕಾಶಿಯಿಂದ ಗಂಗೋತ್ರಿಗೆ ತೆರಳುವಾಗ ಸಂಪರ್ಕ ಸಾಧಿಸಿದ್ದಾರೆ ಎಂದು ಸಂಬಂಧಿಕರು ಹೇಳಿದ್ದರು.
ಇದೀಗ ಈ ಗುಂಪು ಪ್ರಮುಖ ವಿಪತ್ತು ತಾಣವಾದ ಗಂಗೋತ್ರಿಯಿಂದ ಸುಮಾರು 4 ಕಿ.ಮೀ ದೂರದಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ರಸ್ತೆಗಳು ಮುಚ್ಚಿಹೋಗಿದ್ದರಿಂದ ಅಲ್ಲೇ ಸಿಲುಕಿಕೊಂಡರು. ಇದರಿಂದ ಅವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ.
ಉತ್ತರಾಖಂಡದಲ್ಲಿ ಮೇಘಸ್ಫೋಟದ ನಂತರ ಸಿಲುಕಿಕೊಂಡಿದ್ದ ಕೇರಳದ ಒಟ್ಟು 28 ಜನರು ಸುರಕ್ಷಿತರಾಗಿದ್ದಾರೆ ಎಂದು ರಕ್ಷಣಾ ಕಾರ್ಯಗಳು ದೃಢಪಡಿಸಿವೆ. ಇದನ್ನು ಉತ್ತರಾಖಂಡ ಮಲಯಾಳಿ ಸಮಾಜ ಅಧ್ಯಕ್ಷ ದಿನೇಶ್ ದೃಢಪಡಿಸಿದ್ದಾರೆ.
ಭಾರತೀಯ ಸೇನೆ, ಐಟಿಬಿಪಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ಆದರೆ, ಕೊಚ್ಚಿಹೋದ ರಸ್ತೆಗಳು ಮತ್ತು ಕುಸಿದ ಸೇತುವೆಗಳು ಪ್ರಯತ್ನಗಳಿಗೆ ಅಡ್ಡಿಯಾಗಿವೆ. ಧರಾಲಿಯಿಂದ ಇಲ್ಲಿಯವರೆಗೆ 130ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.