Sunday, January 11, 2026

ಉತ್ತರ ಭಾರತದಲ್ಲಿ ಮಂಜಿನ ಅಬ್ಬರ: ರಸ್ತೆ ಕಾಣದೆ ಸರಣಿ ಅಪಘಾತ, ನಾಲ್ವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತ ವಾತಾವರಣ ತೀವ್ರಗೊಂಡಿದ್ದು, ದಟ್ಟ ಮಂಜಿನಿಂದ ರಸ್ತೆ ಸಂಚಾರವೇ ಅಸ್ತವ್ಯಸ್ತವಾಗಿದೆ. ಕಡಿಮೆ ಗೋಚರತೆಯ ಕಾರಣದಿಂದಾಗಿ ಹಲವು ಕಡೆಗಳಲ್ಲಿ ಸಂಭವಿಸಿದ ಸರಣಿ ರಸ್ತೆ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿ, ಸುಮಾರು 30 ಮಂದಿ ಗಾಯಗೊಂಡಿದ್ದಾರೆ.

ಪಂಜಾಬ್ ಹಾಗೂ ಹರಿಯಾಣದ ಅನೇಕ ಭಾಗಗಳಲ್ಲಿ ಮಂಜು ಇಷ್ಟು ದಟ್ಟವಾಗಿದ್ದು, ಸಮೀಪದಲ್ಲಿರುವ ವಸ್ತುಗಳೂ ಸ್ಪಷ್ಟವಾಗಿ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಎರಡು ದಿನಗಳಲ್ಲಿಯೂ ಉತ್ತರ ಭಾರತದಲ್ಲಿ ಶೀತಗಾಳಿ ಇನ್ನಷ್ಟು ಬಲ ಪಡೆಯಲಿದೆ.

ಕಾಶ್ಮೀರ ಕಣಿವೆಯಲ್ಲಿ ಈಗಾಗಲೇ ಶೂನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗುತ್ತಿದ್ದು, ಇದರ ಪರಿಣಾಮವಾಗಿ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿದೆ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಕನಿಷ್ಠ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಐಎಂಡಿ ತಿಳಿಸಿದೆ.

ಇದನ್ನೂ ಓದಿ: FOOD | ಆರೋಗ್ಯಕರ ಗೋಧಿ ಕಿಚಡಿ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಟ್ರೈ ಮಾಡಿ

ಹೋಶಿಯಾರ್‌ಪುರ–ದಾಸುಯಾ ರಸ್ತೆಯಲ್ಲಿ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಪುರುಷರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ದಟ್ಟ ಮಂಜಿನಿಂದ ಗೋಚರತೆ ಕಡಿಮೆಯಾಗಿದ್ದೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನದಲ್ಲೂ ಅಪಘಾತಗಳು ಸಂಭವಿಸಿದ್ದು, ಜೈಪುರ–ದೆಹಲಿ ಎನ್‌ಎಚ್–48ರಲ್ಲಿ ಬಸ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಸುಮಾರು 25 ಮಂದಿ ಗಾಯಗೊಂಡಿದ್ದಾರೆ. ಜೈಸಲ್ಮೇರ್‌ನಲ್ಲಿ ಬಸ್ ಪೊಲೀಸ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಟೇಷನ್ ಹೌಸ್ ಅಧಿಕಾರಿ ಸೇರಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!