ಹೊಸದಿಗಂತ ವರದಿ ಬೀದರ್:
ನಮ್ಮ ಜಾನಪದ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ನಾವು ಎಲ್ಲರೂ ಪಣ ತೊಡಬೇಕು. ಇಂತಹ ಜಾತ್ರಾ ಮಹೋತ್ಸವಗಳು ಗ್ರಾಮೀಣ ಕಲೆ-ಸಂಸ್ಕೃತಿಗೆ ಉತ್ತೇಜನ ನೀಡುವುದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಫೆ.11 ತಂದು ಔರಾದ(ಬಿ) ತಾಲ್ಲೂಕಿನ ಘಮಸುಬಾಯಿ ತಾಂಡಾ ಬೋಂತಿಯಲ್ಲಿ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕತೆಗೆ ಒಗ್ಗಿಕೊಂಡಿರುವ ಇಂದಿನ ಪೀಳಿಗೆ ಎಲ್ಲ ಕೆಲಸ ಕಾರ್ಯಗಳಿಗೆ ಯಂತ್ರ, ತಂತ್ರಗಳನ್ನು ಅವಲಂಬಿಸಿದ್ದಾರೆ. ಗ್ಯಾಸ್, ಕೂಕ್ಕರ್ ಬಂದ ಮೇಲೆ ಮಹಿಳೆಯರು, ಮೊಬೈಲ್ ಬಂದ ನಂತರ ಎಲ್ಲರೂ ಸದಾ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿದ್ದಾರೆ. ಧರ್ಮ, ಸಂಪ್ರದಾಯ, ಕಲೆ, ಸಾಂಸ್ಕೃತಿಗೆ ಸಮಯ ಕೊಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾಶಾಸನ ಪಡೆಯುವ ಕಲಾವಿದರು ಔರಾದನಲ್ಲಿದ್ದಾರೆ. ಮಾಶಾಸನ ಹಾಗೂ ಯಾವುದೇ ರೀತಿಯ ಕೆಲಸಗಳಿಗೆ ಕಛೇರಿಗೆ ಬರುವ ಕಲಾವಿದರ ಕೆಲಸಗಳನ್ನು ಬೇಗ ಮಾಡಿಕೊಡಬೇಕೆಂದು ವೇದಿಕೆಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ ಅವರಿಗೆ ತಿಳಿಸಿದರು.
ಇಚ್ಛಾಪೂರ್ತಿ ಮಾತಾ ಜಗದಂಬಾ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿದೇವತೆ. ಮಿನಿ ತುಳಜಾಪೂರ, ಎರಡನೇ ಪೌರಾದೇವಿ ಎಂದು ಕರೆಯಲಾಗುವ ಇಲ್ಲಿ ಅನೇಕ ಭಕ್ತರ ಇಷ್ಟಾರ್ಥಗಳು ಈಡೇರಿವೆ. ನಾನು ದೇವಿಯ ಪರಮ ಭಕ್ತನಾಗಿದ್ದು ನನ್ನ ಜೀವನದಲ್ಲಿ ಎದುರಾದ ಎಲ್ಲ ಸಂಕಷ್ಟಗಳು ದೂರವಾಗಿವೆ. ದೇವಿಯ ಆಶೀರ್ವಾದದಿಂದ ಹಲವರ ಜೀವನದಲ್ಲಿ ಬದಲಾವಣೆಯಾಗಿದೆ. ಹಾಗಾಗಿ ಕರ್ನಾಟಕವಲ್ಲದೇ ಮಹಾರಾಷ್ಟ್ರ, ತೆಲಂಗಾಣಾದಿಂದಲೂ ಸಾಕಷ್ಟು ಭಕ್ತರು ಜಾತ್ರೆಗೆ ಬಂದು ಪುನೀತರಾಗುತ್ತಾರೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, ಶಾಸಕ ಪ್ರಭು ಚವ್ಹಾಣ ಅವರು ಧರ್ಮ, ಕಲೆ ಮತ್ತು ಸಂಸ್ಕೃತಿಯ ಆರಾಧಕರಾಗಿದ್ದು, ಈ ದಿಶೆಯಲ್ಲಿ ಪ್ರತಿ ವರ್ಷ ಜಾತ್ರೆಯ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಎಲ್ಲರಂತೆ ಪಟ್ಟಣ ಸೇರದೇ ತಮ್ಮ ಗ್ರಾಮವನ್ನೇ ಪಟ್ಟಣದ ಮಾದರಿಯಲ್ಲಿ ಬೆಳೆಸುತ್ತಿರುವುದು ಮಾದರಿ ಕೆಲಸ ಎಂದರು.
ಇದನ್ನೂ ಓದಿ:
ಬಂಜಾರಾ ಸಮಾಜದ ಧರ್ಮಗುರುಗಳು ಹಾಗೂ ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರಾದ ಪೂಜ್ಯ ಬಾಬುಸಿಂಗ್ ಮಹಾರಾಜ ಪೌರಾದೇವಿ ದಿವ್ಯ ಸಾನಿಧ್ಯ ವಹಿಸಿದ್ದರು. ಡೋಣಗಾಂವ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು, ಗುಡಪಳ್ಳಿ ಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ಠಾಣಾ ಕುಶನೂರು ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿ, ಸೇವಾನಗರ ಶಿವಶಕ್ತಿ ಧಾಮದ ಪೂಜ್ಯ ಗೋವಿಂದರಾವ ಮಹಾರಾಜರು, ಮುಖಂಡರಾದ ಮಾರುತಿ ಚವ್ಹಾಣ, ಸುರೇಶ ಭೋಸ್ಲೆ, ಕಿರಣ ಪಾಟೀಲ, ಶಿವಾಜಿರಾವ ಪಾಟೀಲ ಮುಂಗನಾಳ, ಪ್ರತೀಕ ಚವ್ಹಾಣ, ರಾಜಶೇಖರ ನಾಗಮೂರ್ತಿ, ಸತೀಷ ಪಾಟೀಲ, ಬಸವರಾಜ ಪವಾರ, ರಮೇಶ ಉಪಾಸೆ, ಬಾಬುರಾವ ತೋರ್ಣಾವಾಡಿ, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ, ಮಲ್ಲಪ್ಪ ನೇಳಗೆ, ಶಕುಂತಲಾ ಮುತ್ತಂಗೆ, ಭಾರತಿ ಬೋಚರೆ, ಗೀತಾ ಗೌಡಾ, ಜಯಶ್ರೀ, ಪ್ರಕಾಶ ಜೀರ್ಗೆ, ಉದಯ ಸೋಲಾಪೂರೆ, ರವೀಂದ್ರ ರೆಡ್ಡಿ, ಸಚಿನ ಬಿರಾದಾರ, ರಮೇಶ ಗೌಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು.
ಜನಮನ ಸೆಳೆದ ಜಾನಪದ ಸಂಭ್ರಮ: ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಜಾನಪದ ಸಂಭ್ರಮ ಭಕ್ತರು ಹಾಗೂ ಸಾರ್ವಜನಿಕರ ಮನಸೆಳೆದಿತು. ಶಾಸಕರು ಕೂಡ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಕಲಾವಿದರಿಗೆ ಹುಮ್ಮಸ್ಸು ನೀಡಿದರು.
ಕೋಲಾಟ, ತಮಟೆ ವಾದನ, ಬಂಜಾರಾ ಸಂಗೀತ, ಬಂಜಾರಾ ನೃತ್ಯ, ಕೀರ್ತನೆ, ಭಜನೆ, ಜಾನಪದ ಸಂಗೀತ, ಗೀಗಿಪದ, ಶಿವ ಭಜನೆ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಲಾವಿದರಿಂದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳು ಜನರನ್ನು ಆಕರ್ಷಿಸಿ ಜಾತ್ರೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿತು. ಸ್ಥಳೀಯ ಕಲಾವಿದರು ಹಾಗೂ ವಿವಿಧ ತಂಡಗಳು ಸಾಂಸ್ಕೃತಿಕ ಕಲೆಗಳ ಮೂಲಕ ಮಾತಾ ಜಗದಂಬೆಯ ಮಹಿಮೆ ಸಾರಿದರು. ನಂತರ ಶಾಸಕರು ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.



