ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು 30 ಗಂಟೆಗಳು ಕಳೆದಿವೆ. ಸುರಂಗದಲ್ಲಿ ಸಿಲುಕಿಕೊಂಡಿರುವ 40 ಮಂದಿ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರಿಗೆ ಆಹಾರ, ನೀರು ಪೂರೈಕೆ ಮಾಡಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ. ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ಜೊತೆ ಸಂಪರ್ಕ ನಡೆದಿದೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಕಾರ್ಮಿಕರು ನಮಗೆ ಮಾಹಿತಿ ನೀಡಿದ್ದಾರೆ. ಸುರಂಗದೊಳಗಿನ ಅವಶೇಷಗಳನ್ನು ತೆಗೆಯುತ್ತ 15 ಮೀಟರ್ ಸಾಗಿದ್ದೇವೆ. ಇನ್ನೂ 35 ಮೀಟರ್ ಕೊರೆದು, ಒಳಗೆ ಹೋಗಿ ಕಾರ್ಮಿಕರನ್ನು ರಕ್ಷಿಸುತ್ತೇವೆ. ಅವರಿಗೆ ನೀರು, ಆಹಾರ, ಕೃತಕ ಆಮ್ಲಜನಕ ಸೇರಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ” ಎಂದು ಉತ್ತರಕಾಶಿ ಸರ್ಕಲ್ ಆಫೀಸರ್ ಪ್ರಶಾಂತ್ ಕುಮಾರ್ ಅವರು ಹೇಳಿದ್ದಾರೆ.
ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಭಾನುವಾರ ಬೆಳಗಿನ (ನವೆಂಬರ್ 12) ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿ ಬಿದ್ದಿತ್ತು. ಕೂಡಲೇ ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ಕೈಗೊಂಡಿದೆ.