ಮಳೆಯ ಸಮಯದಲ್ಲಿ ಚಹಾದ ಜೊತೆ ಏನಾದರೂ ಬಿಸಿ ಬಿಸಿ ತಿನಿಸು ಬೇಕೆನಿಸುತ್ತದೆ. ಅಂಥ ಸಂದರ್ಭಗಳಲ್ಲಿ ಎಲ್ಲರಿಗೂ ಗೊತ್ತಿರುವ ಫಿಶ್ ಫ್ರೈಗೆ ಪರ್ಯಾಯವಾಗಿ ಸಸ್ಯಾಹಾರಿಗಳು ಸವಿಯಬಹುದಾದ ಒಂದು ರುಚಿಕರ ತಿಂಡಿ ಅಂದ್ರೆ ಅದು ಬಾಳೆಕಾಯಿ ರವಾ ಫ್ರೈ.
ಬೇಕಾಗುವ ಸಾಮಾಗ್ರಿಗಳು
ಬಾಳೆಕಾಯಿ – 2
ಅಚ್ಚಖಾರದ ಪುಡಿ – 2 ಚಮಚ
ಧನಿಯಾ ಪುಡಿ – ಅರ್ಧ ಚಮಚ
ಅರಿಶಿಣ ಪುಡಿ – ಕಾಲು ಚಮಚ
ಗರಂ ಮಸಾಲಾ – ಕಾಲು ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ನಿಂಬೆ ರಸ – 1 ಚಮಚ
ಅಕ್ಕಿ ಹಿಟ್ಟು – ಅರ್ಧ ಚಮಚ
ನೀರು – ಅಗತ್ಯಕ್ಕೆ ತಕ್ಕಷ್ಟು
ಚಿರೋಟಿ ರವೆ – 1 ಕಪ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – 5-6 ಚಮಚ
ತಯಾರಿಸುವ ವಿಧಾನ
ಮೊದಲಿಗೆ ಬಾಳೆಕಾಯಿಯನ್ನು ಸಿಪ್ಪೆ ತೆಗೆದು ಸ್ವಲ್ಪ ದಪ್ಪದ ಉದ್ದ ಕತ್ತರಿಸಿಕೊಳ್ಳಿ. ಕಪ್ಪಾಗದಂತೆ ನೀರಿನಲ್ಲಿ ಹಾಕಿ ಇಡಿ. ನಂತರ ಒಂದು ಪಾತ್ರೆಯಲ್ಲಿ ಖಾರದ ಪುಡಿ, ಧನಿಯಾ, ಅರಿಶಿಣ, ಗರಂ ಮಸಾಲಾ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಹಾಗೂ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರಿನಿಂದ ಮಸಾಲೆಯನ್ನು ಮಿಶ್ರಣ ಮಾಡಿ, ಉಪ್ಪು ಸೇರಿಸಿ.
ಈ ಮಸಾಲೆಯನ್ನು ಬಾಳೆಕಾಯಿ ತುಂಡುಗಳಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಬಳಿಕ ಚಿರೋಟಿ ರವೆ ಮತ್ತು ಸ್ವಲ್ಪ ಉಪ್ಪನ್ನು ಮಿಕ್ಸ್ ಮಾಡಿ, ಮಸಾಲೆ ಹಚ್ಚಿದ ಬಾಳೆಕಾಯಿ ತುಂಡುಗಳನ್ನು ಅದರಲ್ಲಿ ಹೊರಳಾಡಿಸಿ, ಪ್ಯಾನ್‌ನಲ್ಲಿ ಎಣ್ಣೆ ಕಾದ ಬಳಿಕ ಎರಡೂ ಕಡೆ ಚನ್ನಾಗಿ ಫ್ರೈ ಮಾಡಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.