ಕಡ್ಲೆ ಬೇಳೆ (Chana Dal) ಅಥವಾ ಚನಾ ದಾಲ್ ಪೌಷ್ಟಿಕ ಧಾನ್ಯ. ಇದನ್ನು ನಿತ್ಯದ ಆಹಾರದಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸಬಹುದು. ಪಲ್ಯ, ಪಾಯಸ, ದೋಸೆ, ಚಟ್ನಿಗಳನ್ನೂ ಮಾಡಬಹುದು. ಇದರಲ್ಲಿರುವ ಪ್ರೋಟೀನ್, ಫೈಬರ್, ಬಿ-ವಿಟಮಿನ್‌ಗಳು ದೇಹಕ್ಕೆ ಬೇಕಾದ ಶಕ್ತಿ ನೀಡುತ್ತವೆ. ಇವತ್ತು ರುಚಿಕರವಾದ ಕಡಲೆ ಬೇಳೆ ಕರಿ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
1/2 ಕಪ್ ಕಡಲೆ ಬೇಳೆ
1/2 ಟೀಸ್ಪೂನ್ ಜೀರಿಗೆ
ಒಂದು ಚಿಟಿಕೆ ಹಿಂಗ್
1 ಸಣ್ಣ ಈರುಳ್ಳಿ
1/2 ಟೀಸ್ಪೂನ್ ತುರಿದ ಶುಂಠಿ
3-4 ಬೆಳ್ಳುಳ್ಳಿ ಎಸಳುಗಳು
1 ಹಸಿರು ಮೆಣಸಿನಕಾಯಿ
1 ಟೊಮೆಟೊ
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀಸ್ಪೂನ್ ಕೊತ್ತಂಬರಿ ಪುಡಿ
1/4 ಟೀಸ್ಪೂನ್ ಅರಿಶಿನ ಪುಡಿ
2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು
1¼ ಕಪ್ ನೀರು
1½ ಚಮಚ ಎಣ್ಣೆ
ಮಾಡುವ ವಿಧಾನ:
ಮೊದಲು, ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು 30 ನಿಮಿಷದಿಂದ 1 ಗಂಟೆಯವರೆಗೆ ನೆನೆಸಿಡಿ. ಇದರಿಂದ ಬೇಳೆ ಬೇಗ ಬೇಯುತ್ತದೆ ಮತ್ತು ಜೀರ್ಣವಾಗಲು ಸಹ ಸುಲಭವಾಗುತ್ತದೆ. ನಂತರ ಅದರಲ್ಲಿನ ಹೆಚ್ಚುವರಿ ನೀರನ್ನು ತೆಗೆದಿಡಿ.
ಒಂದು ಪ್ರೆಶರ್ ಕುಕ್ಕರ್ ನಲ್ಲಿ 1½ ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಅರ್ಧ ಟೀಚಮಚ ಜೀರಿಗೆ, ಒಂದು ಚಿಟಿಕೆ ಹಿಂಗು ಸೇರಿಸಿ. ಬಳಿಕ ನುಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಸೇರಿಸಿ ಮತ್ತೆ ಒಂದು ನಿಮಿಷ ಫ್ರೈ ಮಾಡಿ.
ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈಗ ನೆನೆಸಿದ ಕಡಲೆ ಬೇಳೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 1 ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ 5-6 ಸೀಟಿ ಬರುವವರೆಗೆ ಬೇಯಿಸಿ.
ಕುಕ್ಕರ್ ಆರಿದ ನಂತರ ಮುಚ್ಚಳವನ್ನು ತೆಗೆದು, ಬೆಳೆಯನ್ನು ಸ್ವಲ್ಪ ಹಿಸುಕಿ ಮತ್ತೆ 2-3 ನಿಮಿಷ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕಡಲೆ ಬೇಳೆ ಕರಿ ರೆಡಿ.