ಮಳೆ ಬರೋವಾಗ ಬಿಸಿಬಿಸಿ, ಕ್ರೀಮಿಯಾದ ಸ್ವೀಟ್ ಕಾರ್ನ್ ಸೂಪ್ ಸವಿಯುವುದು ಎಷ್ಟು ಮನಸ್ಸಿಗೆ ಹಿತ ಕೊಡುವ ಅನುಭವವೋ ಅಷ್ಟೇ ಆರೋಗ್ಯಕ್ಕೂ ಲಾಭಕಾರಿ. ಇದು ಮಾರುಕಟ್ಟೆಯಲ್ಲಿ ಸಿಗುವ ಹಾಟ್ ಕಾರ್ನ್‌ಗೆ ಪರ್ಯಾಯವಾಗಿ ಮನೆಯಲ್ಲಿ ತಯಾರಿಸಬಹುದಾದ ಸುಲಭವಾದ ಸೂಪ್. ಈ ಕ್ರೀಮಿ ರೆಸಿಪಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವಂತದ್ದು. ಈಗ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು:
ಸಿಹಿ ಕಾರ್ನ್ – 1 ಕಪ್
ಕಾರ್ನ್ ಫ್ಲೋರ್ – 1 ಚಮಚ
ಹಾಲು – 1 ಕಪ್
ನೀರು – 2 ಕಪ್
ಕರಿಮೆಣಸಿನ ಪುಡಿ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಸ್ವಲ್ಪ
ಸ್ಪ್ರಿಂಗ್ ಆನಿಯನ್ ಗ್ರೀನ್ಸ್ – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲಿಗೆ 1 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಾರ್ನ್ ಅನ್ನು, ಚನ್ನಾಗಿ ಬೇಯಿಸಿಕೊಳ್ಳಿ. ಬೇಯಿಸಿದ ಜೋಳದ ಕಾಳುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾರ್ನ್ ಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ, ಪೇಸ್ಟ್ ಅನ್ನು ಫಿಲ್ಟರ್ ಮೂಲಕ ಸೋಸಿ.
ಇದಕ್ಕೆ 1 ಕಪ್ ನೀರು, ಕರಿಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣವನ್ನು ಕುದಿಸಿ. ನಂತರ ಹಾಲಿನೊಂದಿಗೆ ಕಾರ್ನ್ ಫ್ಲೋರ್ ಅನ್ನು ಬೆರೆಸಿದ ಮಿಶ್ರಣವನ್ನು ತಯಾರಿಸಿ, ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಹೊತ್ತು ಮತ್ತೆ ಕುದಿಸಿ, ಇದಕ್ಕೆ ಕೊನೆಯದಾಗಿ ಸ್ಪ್ರಿಂಗ್ ಆನಿಯನ್ ಗ್ರೀನ್ಸ್, ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಹಾಕಿ ಅಲಂಕರಿಸಿದರೆ ಕ್ರೀಮಿ ಸ್ವೀಟ್ ಕಾರ್ನ್ ಸೂಪ್ ಸಿದ್ಧ.