ರುಚಿಕರವಾದ ಮಾಂಸಾಹಾರದ ಬಗ್ಗೆ ಮಾತನಾಡಿದರೆ, ಮೊದಲು ನೆನೆಪಿಗೆ ಬರೋದು ಚಿಕನ್. ಅದರಲ್ಲೂ ಹಸಿರಾಗಿ, ಖಾರವಾಗಿರೋ ಹರಿಯಾಲಿ ಚಿಕನ್ ಕರಿ ಇದ್ದರೆ, ಎರಡು ತುತ್ತು ಅನ್ನ ಜಾಸ್ತಿನೇ ಹೊಟ್ಟೆ ಸೇರುತ್ತೆ. ಇದು ರೆಸ್ಟೊರೆಂಟ್‌ಗಳಲ್ಲಿ ಹೆಚ್ಚು ಪಾಪ್ಯುಲರ್ ಆಗಿದ್ದರೂ, ಮನೆಯಲ್ಲಿಯೇ ಅದೇ ರುಚಿಯಲ್ಲಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಚಿಕನ್- 1/5 ಕೆ.ಜಿ
ಈರುಳ್ಳಿ _ 2
ಎಣ್ಣೆ- 4-5 ಚಮಚ
ಪುದಿನಾ – 1/2 ಕಪ್
ಹಸಿಮೆಣಸು – 5-6
ಏಲಕ್ಕಿ -3
ಚೆಕ್ಕೆ -2
ಜೀರಾ ಪೌಡರ್ – 1/2 ಚಮಚ
ಖಾರದ ಪುಡಿ – 1 ಚಮಚ
ಮೊಸರು – 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಕಪ್
ಕೊತ್ತಂಬರಿ ಸೊಪ್ಪು – 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲು ಮಿಕ್ಸಿಯಲ್ಲಿ ಪುದಿನಾ, ಹಸಿಮೆಣಸು, ಮೊಸರು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಪಕ್ಕಕ್ಕೆ ಇಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ, ಚೆಕ್ಕೆ ಮತ್ತು ಏಲಕ್ಕಿ ಹಾಕಿ ಬಾಡಿಸಿ. ತಕ್ಷಣದಲ್ಲೇ ಈರುಳ್ಳಿ ಸೇರಿಸಿ ಅದನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಬೇಕು.
ಈ ಹುರಿದ ಈರುಳ್ಳಿಯಲ್ಲಿ ಈಗ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಜೀರಾ ಪುಡಿ, ಖಾರದ ಪುಡಿ ಹಾಗೂ ಉಳಿದ ಮೊಸರನ್ನೂ ಸೇರಿಸಿ. ಈ ಮಿಶ್ರಣದಲ್ಲಿ ಈಗ ಮೊದಲೇ ರುಬ್ಬಿದ ಪುದಿನಾ ಪೇಸ್ಟ್ ಹಾಕಿ ಸ್ವಲ್ಪ ಕಾಲ ಕುದಿಸಿ.
ಕುದಿದ ನಂತರ ಉಪ್ಪು ಸೇರಿಸಿ, ಬಾಣಲೆಗೆ ಮುಚ್ಚಳ ಹಾಕಿ 15-20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಹರಿಯಾಲಿ ಚಿಕನ್ ಕರಿ ಸಿದ್ಧವಾಗುತ್ತದೆ.