ಬೆಳಗ್ಗೆ ಬಿಸಿ ಬಿಸಿ ದೋಸೆ ಜೊತೆ ಚಟ್ನಿ ಅಥವಾ ಸಾಂಬಾರ್ ಇದ್ದರೆ ದಿನದ ಆರಂಭವೇ ವಿಶೇಷವಾಗುತ್ತದೆ. ಕೆಲವರಿಗೆ ಸಾಮಾನ್ಯ ದೋಸೆಯ ತಿಂದು ಬೇಜಾರಾಗಿರಬಹುದು. ಅಂತವರಿಗೆ ತೊಗರಿ ಬೇಳೆ ದೋಸೆಯನ್ನು ಮನೆಯಲ್ಲಿ ಟ್ರೈ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ತೊಗರಿ ಬೇಳೆ – 1 ಕಪ್
ಉದ್ದಿನ ಬೇಳೆ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕ್ಯಾರೆಟ್ (ತುರಿದದ್ದು) – ಅರ್ಧ ಕಪ್
ಹಸಿಮೆಣಸು – 3
ಶುಂಠಿ – ಸ್ವಲ್ಪ
ಕರಿಬೇವು – ಸ್ವಲ್ಪ
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ತಯಾರಿಸುವ ವಿಧಾನ:
ಮೊದಲಿಗೆ ತೊಗರಿ ಬೇಳೆ, ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಬಿಡಿ. ಬಳಿಕ ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ಕೊಳ್ಳಿ. ರುಬ್ಬಿದ ಈ ಹಿಟ್ಟಿಗೆ ತುರಿದ ಕ್ಯಾರೆಟ್, ಹಸಿಮೆಣಸು, ಶುಂಠಿ, ಕರಿಬೇವು, ಈರುಳ್ಳಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ದೋಸೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
ತವಾ ಬಿಸಿಯಾದ ಬಳಿಕ ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ಹರಡಿ ದೋಸೆ ತಯಾರಿಸಿ. ದೋಸೆಯ ಎರಡು ಬದಿ ಚನ್ನಾಗಿ ಬೆಂದರೆ ತೊಗರಿ ಬೇಳೆ ದೋಸೆ ರೆಡಿ.