ಬ್ಯಾಗ್‌ನಲ್ಲಿ 10 ಬಂದೂಕು ಹೊಂದಿದ್ದ ಫುಡ್ ಡೆಲಿವರಿ ಏಜೆಂಟ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ಯಾಗ್‌ನಲ್ಲಿ 10 ಬಂದೂಕು ಹೊಂದಿದ್ದ ಫುಡ್‌ ಡೆಲಿವರಿ ಏಜೆಂಟ್‌ನ್ನು ಬಂಧಿಸಲಾಗಿದೆ.

ಹರಿಯಾಣದಲ್ಲಿ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮೀರತ್‌ನ 23 ವರ್ಷದ ವ್ಯಕ್ತಿಯೊಬ್ಬ ಅಕ್ರಮವಾಗಿ ಬಂದೂಕುಗಳನ್ನು ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಮುಜಫರ್ನಗರ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿಗಳು ಡೆಲಿವರಿ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ ದೇಶಿ ನಿರ್ಮಿತ 10 ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ರಾಮರಾಜ್ ಪ್ರದೇಶದ ಜಮಾಲ್‌ಪುರ ಕಾಲುವೆ ಕಲ್ವರ್ಟ್ ಬಳಿ ಆರೋಪಿಯನ್ನು ತಡೆದಿದ್ದಾರೆ. ಈ ವೇಳೆ ಬೈಕ್ ನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಹಿಡಿದು ಪರಿಶೀಲಿಸಿದಾಗ ಆತನ ಬ್ಯಾಗ್ ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಜ್‌ಗಳು ಪತ್ತೆಯಾಗಿವೆ.

ಬಂಧಿತ ಆರೋಪಿಯನ್ನು ಸುಧಾಂಶು ಕುಮಾರ್ ಎಂದು ಗುರುತಿಸಲಾಗಿದ್ದು, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಗೆ ಅಕ್ರಮವಾಗಿ ಬಂದೂಕುಗಳನ್ನು ಕಳ್ಳಸಾಗಣೆ ಮಾಡಲು ತನ್ನ ಫುಡ್ ಡೆಲಿವರಿ ಏಜೆಂಟ್ ಕೆಲಸವನ್ನು ಬಳಸುತ್ತಿದ್ದ. ಆತನಿಗೆ ಕ್ರಿಮಿನಲ್ ಇತಿಹಾಸವಿದ್ದು, ಆತನ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಮುಜಫರ್ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಸುಧಾಂಶು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಇತರ ಆರು ಜನರ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ್ದಾನೆ. ಈ ಶಂಕಿತರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!