ಮಂಗಳೂರು ಕಡೆ ಹೋದರೆ ಬೆಳಗಿನ ಉಪಹಾರಕ್ಕೂ, ಸಂಜೆ ತಿಂಡಿಗೂ ಎಲ್ಲೆಡೆ ಸಿಗುವ ಸ್ಪೆಷಲ್ ಐಟಂ ಎಂದರೆ ಮಂಗಳೂರು ಬನ್ಸ್. ಬಾಳೆಹಣ್ಣು ಬಳಸಿ ಮಾಡುವ ಈ ಬನ್ಸ್ ಪೂರಿ ಹೋಲಿಕೆಯಿದ್ದರೂ ಸ್ವಲ್ಪ ಸಿಹಿಯಾಗಿದ್ದು, ಚಟ್ನಿಯ ಜೊತೆಗೆ ತಿಂದರೆ ಅದ್ಭುತ ಕಾಂಬಿನೇಷನ್.
ಬೇಕಾಗುವ ಸಾಮಗ್ರಿಗಳು:
ಬಾಳೆಹಣ್ಣು – 2-3
ಮೈದಾ ಹಿಟ್ಟು – 2 ಕಪ್
ಸಕ್ಕರೆ – 3 ಟೇಬಲ್ ಚಮಚ
ಜೀರಿಗೆ – 1 ಟೀ ಚಮಚ
ಮೊಸರು – ¼ ಕಪ್
ಬೇಕಿಂಗ್ ಸೋಡಾ – ಚಿಟಿಕೆಯಷ್ಟು
ಉಪ್ಪು – ½ ಟೀ ಚಮಚ
ಅಡುಗೆ ಎಣ್ಣೆ – ಕರಿಯಲು ಬೇಕಾದಷ್ಟು
ಮಾಡುವ ವಿಧಾನ:
ಬಾಳೆಹಣ್ಣು ಸಿಪ್ಪೆ ತೆಗೆದು, ಪಾತ್ರೆಯಲ್ಲಿ ಹಾಕಿ ಕೈಯಿಂದ ಹಿಸುಕಿಕೊಳ್ಳಿ. ಇದಕ್ಕೆ ಸಕ್ಕರೆ, ಜೀರಿಗೆ, ಉಪ್ಪು ಹಾಗೂ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಮೈದಾ ಹಿಟ್ಟು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಹಿಟ್ಟು ಮೃದುವಾಗಲು 5 ನಿಮಿಷ ನಾದಿ, ನಂತರ ಎಣ್ಣೆ ಹಚ್ಚಿ ಉಂಡೆಯನ್ನಾಗಿ ಮಾಡಿ.
ಹಿಟ್ಟಿನ ಮೇಲೆ ಒದ್ದೆ ಬಟ್ಟೆ ಮುಚ್ಚಿ, ಬೆಚ್ಚಗಿನ ಸ್ಥಳದಲ್ಲಿ 8 ಗಂಟೆಗಳ ಕಾಲ ಹುದುಗಲು ಬಿಡಿ. ಹಿಟ್ಟು ಹುದುಗಿದ ಬಳಿಕ ಚಿಕ್ಕ ಉಂಡೆಗಳನ್ನಾಗಿ ಮಾಡಿ, ಪೂರಿಗಿಂತ ಸ್ವಲ್ಪ ದಪ್ಪವಾಗಿರುವಂತೆ ಲಟ್ಟಿಸಿ. ಬಾಣಲೆಗೆ ಎಣ್ಣೆ ಬಿಸಿ ಮಾಡಿ, ಲಟ್ಟಿಸಿದ ಬನ್ಸ್ ಹಾಕಿ ಕಂದು ಬಣ್ಣ ಬರುವವರೆಗೆ ಎರಡೂ ಬದಿಯನ್ನೂ ಕರಿಯಿರಿ.