ಊಟದ ನಂತರ ಅನ್ನ ಉಳಿದರೆ ಏನು ಮಾಡುವುದು ಎಂಬ ಯೋಚನೆ ಎಲ್ಲರಲ್ಲೂ ಸಾಮಾನ್ಯ. ಹಾಗಿದ್ದರೆ, ನಿಮ್ಮ ಕಿಚನ್‌ನಲ್ಲಿ ಉಳಿದಿರುವ ಅನ್ನವನ್ನು ಬಳಸಿಕೊಂಡು ರುಚಿಕರವಾದ ಪಕೋಡವನ್ನು ತಯಾರಿಸಬಹುದು. ಈ ಪಕೋಡ ಬಿಸಿ ಬಿಸಿಯಾಗಿ ಈರುಳ್ಳಿ ಪಕೋಡದಷ್ಟೇ ರುಚಿಕರವಾಗಿರುತ್ತೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 3 ಕಪ್,
ಕಡಲೆಹಿಟ್ಟು – 4 ಚಮಚ
ಈರುಳ್ಳಿ – 2
ಹಸಿಮೆಣಸು – 2
ಕೊತ್ತಂಬರಿ ಸೊಪ್ಪು- ಸ್ವಲ್ಪ
ಚಾಟ್ ಮಸಾಲ- 1 ಚಮಚ,
ರುಚಿಗೆ ತಕ್ಕಷ್ಟು ಉಪ್ಪು
ಶುಂಠಿ 1 ಇಂಚು
ಮಾಡುವ ವಿಧಾನ
3 ಕಪ್ ಬೇಯಿಸಿದ ಅನ್ನ, 4 ಚಮಚ ಕಡಲೆಹಿಟ್ಟು, 2 ಹೆಚ್ಚಿದ ಈರುಳ್ಳಿ, 2 ಹಸಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ಚಾಟ್ ಮಸಾಲ, ಉಪ್ಪು ಮತ್ತು 1 ಇಂಚು ಶುಂಠಿ ಬೇಕಾಗುತ್ತದೆ. ಈ ಎಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಪಕೋಡ ಹದಕ್ಕೆ ಹಿಟ್ಟನ್ನು ತಯಾರಿಸಿ. ಎಣ್ಣೆಯನ್ನು ಬಿಸಿ ಮಾಡಿದ ನಂತರ, ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ತಯಾರಿಸಿ ಎಣ್ಣೆಯಲ್ಲಿ ಬಿಟ್ಟು, ಎರಡೂ ಬದಿಯಿಂದ ಕಂದು ಬಣ್ಣಕ್ಕೆ ಬರುವವರೆಗೆ ಕರಿದರೆ ರೈಸ್ ಪಕೋಡ ರೆಡಿ.