ಗರಿಗರಿಯಾದ ಉದ್ದಿನಬೇಳೆ ಚಕ್ಲಿ ಮಾಡೋದು ಹೇಗೆ ಅಂತ ನೋಡೋಣ:
ಬೇಕಾಗುವ ಸಾಮಗ್ರಿಗಳು:
1 ಕಪ್ ಉದ್ದಿನಬೇಳೆ
2 ಕಪ್ ಅಕ್ಕಿ ಹಿಟ್ಟು
1 ಚಮಚ ಬಿಳಿ ಎಳ್ಳು
1/2 ಚಮಚ ಓಂ ಕಾಳು
1/4 ಚಮಚ ಇಂಗು
1 ಚಮಚ ಬೆಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು 2-3 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರನ್ನು ಸಂಪೂರ್ಣವಾಗಿ ಬಸಿದು ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪವೂ ನೀರು ಹಾಕಬೇಡಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರುಬ್ಬಿದ ಉದ್ದಿನಬೇಳೆ, ಬಿಳಿ ಎಳ್ಳು, ಓಂ ಕಾಳು, ಇಂಗು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕಾಯಿಸಿ ಬೆಣ್ಣೆಯನ್ನು ಸೇರಿಸಿ ಹಿಟ್ಟಿನೊಂದಿಗೆ ಚೆನ್ನಾಗಿ ಕಲಸಿ. ಹಿಟ್ಟು ಉದುರುದುರಾಗಿರಬೇಕು. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಮೃದುವಾದ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಹಿಟ್ಟು ಚಕ್ಲಿ ಹಿಟ್ಟಿನ ಹದಕ್ಕೆ ಇರಬೇಕು. ಚಕ್ಲಿ ಮಾಡುವ ಅಚ್ಚಿಗೆ ಸ್ವಲ್ಪ ಎಣ್ಣೆ ಸವರಿ, ತಯಾರಿಸಿದ ಹಿಟ್ಟನ್ನು ತುಂಬಿಸಿ. ಒಂದು ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಸಣ್ಣ ಸಣ್ಣ ಚಕ್ಲಿಗಳನ್ನು ಒತ್ತಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ತಯಾರಿಸಿದ ಚಕ್ಲಿಗಳನ್ನು ನಿಧಾನವಾಗಿ ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಕರಿಯಿರಿ. ಚಕ್ಲಿಗಳು ಕಂದು ಬಣ್ಣಕ್ಕೆ ತಿರುಗಿದ ನಂತರ ಎಣ್ಣೆಯಿಂದ ತೆಗೆದು ಟಿಶ್ಯೂ ಮೇಲೆ ಹಾಕಿ ಇದರಿಂದ ಹೆಚ್ಚುವರಿ ಎಣ್ಣೆ ಹೀರಿಕೊಳ್ಳಲ್ಪಡುತ್ತದೆ. ಸಂಜೆ ಟೈಮ್‌ಗೆ ಕಾಫಿ ಅಥವಾ ಟೀ ಜೊತೆ ಸವಿದರೆ ಅದರ ರುಚಿಯೇ ಅದ್ಭುತ.