ಹೊರಗಿನ ಆಹಾರ ತಿಂದು ಹಲವರಿಗೆ ಆಸಿಡಿಟಿ, ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ಮನೆಯಲ್ಲಿಯೇ ಶುದ್ಧವಾಗಿ, ಸ್ವಚ್ಛವಾಗಿ ತಯಾರಿಸುವ ಆಹಾರವೇ ಉತ್ತಮ. ವಿಶೇಷವಾಗಿ ಸಮಯ ಉಳಿಯಬೇಕಾದರೆ, ತಕ್ಷಣ ತಯಾರಿಸಬಹುದಾದ ಪದಾರ್ಥಗಳು ಬೇಕು. ಅಂಥದ್ದೊಂದು ರುಚಿಕರ ಆಯ್ಕೆ ಎಂದರೆ – ಬದನೆಕಾಯಿ ಚಟ್ನಿ. ಈ ಚಟ್ನಿಯನ್ನು ಚಪಾತಿ,ದೋಸೆಯ ಅಥವಾ ಅನ್ನದ ಜೊತೆಗೆ ತಿಂದರೆ ಅದ್ಭುತವಾದ ರುಚಿ ಸಿಗುತ್ತದೆ. ಜಾಸ್ತಿ ಸಮಯ ತೆಗೆದುಕೊಳ್ಳದೆ, ಬೇಗನೆ ತಯಾರಾಗುತ್ತೆ.
ಬೇಕಾಗುವ ಸಾಮಗ್ರಿಗಳು:
ಬದನೆಕಾಯಿ – 4
ನೆಲಗಡಲೆ ಹುರಿದದ್ದು – 2 ಚಮಚ
ಹಸಿಮೆಣಸು – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ತೆಂಗಿನಕಾಯಿ ತುರಿ – 1 ಕಪ್
ಬೆಳ್ಳುಳ್ಳಿ – 2 ಎಲೆ
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ – 1 ಚಮಚ
ಸಾಸಿವೆ – 1 ಚಮಚ
ಕರಿಬೇವು – ಸ್ವಲ್ಪ
ತಯಾರಿಸುವ ವಿಧಾನ:
ಮೊದಲಿಗೆ ಬದನೆಕಾಯಿ ಹಾಗೂ ಬೆಳ್ಳುಳ್ಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ನಂತರ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ನೆಲಗಡಲೆ, ಉಪ್ಪು, ಬೇಯಿಸಿದ ಬದನೆಕಾಯಿ ಹಾಗೂ ಬೆಳ್ಳುಳ್ಳಿ ಮತ್ತು ತೆಂಗಿನಕಾಯಿಯೊಂದಿಗೆ ಮಿಕ್ಸರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬದನೆ ಬೇಯಿಸಿದ ನೀರನ್ನು ಇದರಲ್ಲಿ ಬೆರೆಸಿದರೆ ಚಟ್ನಿಗೆ ಹೆಚ್ಚು ರುಚಿ ಬರುತ್ತದೆ.
ಒಗ್ಗರಣೆಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ, ಕರಿಬೇವು ಸೇರಿಸಿ. ಈ ಒಗ್ಗರಣೆಯನ್ನು ರುಬ್ಬಿದ ಮಿಶ್ರಣದ ಮೇಲೆ ಹಾಕಿ ಅಷ್ಟೆ. ಬಾಯಲ್ಲಿ ನೀರೂರಿಸುವ ಬದನೆಕಾಯಿ ಚಟ್ನಿ ಸವಿಯಲು ಸಿದ್ಧ!