ಮಳೆಗಾಲ ಬಂದಾಗ ಹವಾಮಾನದ ಬದಲಾವಣೆಗಳಿಂದ ಶೀತ, ಕೆಮ್ಮು, ಜ್ವರ, ಗಂಟಲು ನೋವು ಮುಂತಾದ ತೊಂದರೆಗಳು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಸೇವಿಸಲು ರುಚಿಕರ ಮತ್ತು ಆರೋಗ್ಯಕರ ಆಯ್ಕೆಯೆಂದರೆ ಬೆಳ್ಳುಳ್ಳಿ ರಸಂ. ಇದು ಕೇವಲ ರುಚಿಯಷ್ಟೇ ಅಲ್ಲ, ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಸೋಂಕು ತಡೆಯುವ ಗುಣವನ್ನು ಹೊಂದಿದೆ.
ಬೇಕಾಗುವ ಪದಾರ್ಥಗಳು
ಹುಣಸೆಹಣ್ಣು – ಒಂದು ಸಣ್ಣ ನಿಂಬೆ ಗಾತ್ರದಷ್ಟು
ಟೊಮೆಟೊ – 2
ಜೀರಿಗೆ – 2 ಟೀ ಸ್ಪೂನ್
ಕಾಳು ಮೆಣಸು – 1 ಟೀ ಸ್ಪೂನ್
ಬೆಳ್ಳುಳ್ಳಿ – ಒಂದು ಹಿಡಿ
ಎಣ್ಣೆ – 1 ಟೀ ಸ್ಪೂನ್
ಹಸಿಮೆಣಸು – 4 ರಿಂದ 5
ಕರಿಬೇವು – ಒಂದು ಹಿಡಿ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ¼ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಹುಣಸೆಹಣ್ಣನ್ನು ನೀರಲ್ಲಿ ನೆನೆಸಿ ರಸ ತೆಗೆದುಕೊಳ್ಳಿ. ಬಳಿಕ ಟೊಮೆಟೊಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇಡಿ. ಮಿಕ್ಸರ್‌ನಲ್ಲಿ ಜೀರಿಗೆ, ಕಾಳು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಒರಟಾಗಿ ರುಬ್ಬಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಸಿಮೆಣಸು ಹಾಗೂ ಕರಿಬೇವು ಹಾಕಿ ಹುರಿಯಿರಿ. ನಂತರ ಟೊಮೆಟೊ, ಉಪ್ಪು ಮತ್ತು ಅರಿಶಿನ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಈಗ ರುಬ್ಬಿದ ಬೆಳ್ಳುಳ್ಳಿ ಮಿಶ್ರಣವನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಹುಣಸೆ ರಸ ಹಾಗೂ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿಬಿಸಿ ರಸಂ ಸವಿಯಲು ಸಿದ್ಧ.