ಪ್ರತಿಯೊಂದು ಕುಟುಂಬದಲ್ಲಿಯೂ ಕೆಲವೊಂದು ಹೊತ್ತಿನಲ್ಲಿ ಎಲ್ಲರೂ ಒಟ್ಟಿಗೆ ಕೂತು ಬಿಸಿಬಿಸಿ ತಿಂಡಿ ಅಥವಾ ಚಾಟ್ ಟೈಮ್ ನ ರುಚಿಯನ್ನು ಸವಿಯಲು ಇಚ್ಛಿಸುತ್ತಾರೆ. ಆದರೆ ಹೊರಗಡೆ ತಿನಿಸು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಈ ಸಮಯದಲ್ಲಿ ಮನೆಯಲ್ಲಿಯೇ ತಯಾರಿಸಬಹುದಾದ ರುಚಿಕರ, ಸುಲಭ ಹಾಗೂ ಆರೋಗ್ಯಕರ ಆಯ್ಕೆ ಸೋಯಾ ಮಂಚೂರಿ.
ಬೇಕಾಗುವ ಪದಾರ್ಥಗಳು:
ಸೋಯಾ – 100 ಗ್ರಾಂ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್
ಹಸಿಮೆಣಸಿನಕಾಯಿ – 2-3
ಈರುಳ್ಳಿ – ಮಿಡಿಯಂ ಸೈಜ್
ಸೋಯಾ ಸಾಸ್
ಟೊಮೆಟೊ ಸಾಸ್
ಜೋಳದ ಹಿಟ್ಟು (ಕಾರ್ನ್ ಫ್ಲೋರ್)
ಮೈದಾ ಹಿಟ್ಟು
ಕ್ಯಾಪ್ಸಿಕಂ
ಉಪ್ಪು
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ 100 ಗ್ರಾಂ ಸೋಯಾ ಚಂಕ್ಸ್‌ಗಳನ್ನು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ 5-6 ನಿಮಿಷ ಬೇಯಿಸಿ. ಬಿಸಿ ನೀರಿನಲ್ಲಿ ಬೇಯಿಸಿದ ನಂತರ ಅದನ್ನು ಚೆನ್ನಾಗಿ ಹಿಂಡಿ, ಮಿಕ್ಸಿಂಗ್ ಬೌಲಿಗೆ ಹಾಕಿ. ನಂತರ ಅದಕ್ಕೆ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಖಾರದ ಪುಡಿ, ಉಪ್ಪು, ಒಂದು ಸ್ಪೂನ್ ಸೋಯಾ ಸಾಸ್, ಒಂದು ಸ್ಪೂನ್ ಟೊಮೆಟೋ ಸಾಸ್, 2 ಸ್ಪೂನ್ ಮೈದಾ, 3 ಸ್ಪೂನ್ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 5 ನಿಮಿಷಗಳ ಕಾಲ ಮುಚ್ಚಿ ಇಡಬೇಕು.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಮ್ಯಾರಿನೇಟ್ ಮಾಡಿದ ಸೋಯಾ ತುಂಡುಗಳನ್ನು ಒಂದೊಂದಾಗಿ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಕರಿಯಬೇಕು.
ಪ್ರತ್ಯೇಕವಾಗಿ ಇನ್ನೊಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಹಸಿ ಮೆಣಸಿನಕಾಯಿ, ದಪ್ಪಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹುರಿಯಬೇಕು. ಈರುಳ್ಳಿ ಫ್ರೈ ಆದ ಮೇಲೆ ಅದಕ್ಕೆ ಕ್ಯಾಪ್ಸಿಕಂ ಸೇರಿಸಿ, 1 ಸ್ಪೂನ್ ಸೋಯಾ ಸಾಸ್, 1 ಸ್ಪೂನ್ ಟೊಮೆಟೋ ಸಾಸ್, ಸ್ವಲ್ಪ ಪೆಪ್ಪರ್ ಪೌಡರ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಒಂದು ಚಿಕ್ಕ ಬಟ್ಟಲಲ್ಲಿ ಕಾರ್ನ್ ಫ್ಲೋರ್ ಮತ್ತು ಸ್ವಲ್ಪ ನೀರು ಹಾಕಿ ತಯಾರಿಸಿದ ಪೇಸ್ಟ್‌ನ್ನು ಸೇರಿಸಿ, ಅದು ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ. ಕೊನೆಗೆ ಹುರಿದ ಸೋಯಾ ತುಂಡುಗಳನ್ನು ಇದರಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿಬಿಸಿಯಾಗಿ ತಯಾರಾದ ಸ್ಪೈಸಿ ಸೋಯಾ ಮಂಚೂರಿಯನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಬಹುದು.