ಸಾಮಾನ್ಯವಾಗಿ ಬೀಟ್‌ರೂಟ್ ಅನ್ನು ಪಲ್ಯ, ಸಲಾಡ್‌ಗಳಲ್ಲಿ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಮಾಡುತ್ತೇವೆ. ಆದರೆ ಈಗ ಈ ಪೌಷ್ಟಿಕ ತರಕಾರಿಯಿಂದ ರುಚಿಕರ ಮತ್ತು ಆರೋಗ್ಯಕರವಾದ ಸೂಪ್ ತಯಾರಿಸಲು ಸಾಧ್ಯವಿದೆ. ಇದನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ವಿಟಮಿನ್ ಹಾಗೂ ಖನಿಜಾಂಶಗಳಲ್ಲಿ ಸಮೃದ್ಧವಾಗಿರುವ ಬೀಟ್‌ರೂಟ್ ಹೃದಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೀಟ್‌ರೂಟ್ – 1
ಬೆಣ್ಣೆ – 1 ಚಮಚ
ಬಿರಿಯಾನಿ ಎಲೆ – 1
ಮೆಣಸು – ಒಂದು ಚಮಚ
ಶುಂಠಿ- ಒಂದು ಸಣ್ಣ ತುಂಡು
ಬೆಳ್ಳುಳ್ಳಿ – 3 ಎಸಳು
ಈರುಳ್ಳಿ- 1
ಕ್ಯಾರೆಟ್- 1
ಕಾಳು ಮೆಣಸಿನ ಪುಡಿ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬೀಟ್‌ರೂಟ್ ಸಿಪ್ಪೆ ತೆಗೆದು ತೆಳುವಾಗಿ ತುಂಡುಮಾಡಿ. ಈಗ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಬೆಣ್ಣೆ ಹಾಕಿ. ಅದು ಕರಗಿದ ನಂತರ ಬಿರಿಯಾನಿ ಎಲೆ, ಕಾಳು ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ ಹುರಿದುಕೊಳ್ಳಿ. ನಂತರ ಈರುಳ್ಳಿ, ಕ್ಯಾರೆಟ್ ಸೇರಿಸಿ ಸ್ವಲ್ಪ ಫ್ರೈ ಮಾಡಿ. ಇದಕ್ಕೆ ಬೀಟ್‌ರೂಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಬೇಯಿಸಿ. ನಂತರ ಒಂದು ಕಪ್ ನೀರು ಹಾಕಿ ಕುದಿಸಿ.
ಈ ಮಿಶ್ರಣವನ್ನು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪುನಃ ಪ್ಯಾನ್‌ನಲ್ಲಿ ಹಾಕಿ, ಉಪ್ಪು, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ 2-3 ನಿಮಿಷ ಕುದಿಸಿದರೆ ಬಿಸಿ ಬಿಸಿ ಬೀಟ್‌ರೂಟ್ ಸೂಪ್ ರೆಡಿ.