ಈ ಸೆಖೆಗೆ ತಂಪಾದ, ರುಚಿಕರವಾದ ತಿಂಡಿ ತಿನ್ನಬೇಕು ಅನಿಸಿದಾಗ ಸಿಂಪಲ್ ಮೊಸರು ವಡೆ ಟ್ರೈ ಮಾಡಿ. ಮಾಡೋದು ತುಂಬಾ ಸುಲಭ. ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಉದ್ದಿನ ಬೇಳೆ- 1 ಕಪ್
ಹಸಿ ಮೆಣಸಿನಕಾಯಿ – 1 ಅಥವಾ 2 (ಸಣ್ಣಗೆ ಕತ್ತರಿಸಿದ್ದು)
ಶುಂಠಿ – 1/2 ಇಂಚು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ದಪ್ಪ ಮೊಸರು – 2 ಕಪ್
ಸಕ್ಕರೆ – ಅರ್ಧ ಚಮಚ (ರುಚಿಗೆ ತಕ್ಕಷ್ಟು)
ಕಾಳುಮೆಣಸು- 1/2 ಚಮಚ
ನೀರು – 1/2 ಕಪ್
ಚಿಲ್ಲಿ ಸಾಸ್ – 2 ಚಮಚ
ಟೊಮೆಟೊ ಸಾಸ್ – 2 ಚಮಚ
ಕೊತ್ತಂಬರಿ ಪುಡಿ – 1/2 ಚಮಚ
ಹುರಿದ ಜೀರಿಗೆ ಪುಡಿ – 1/2 ಚಮಚ
ಖಾರ ಮೆಣಸಿನ ಪುಡಿ- 1/2 ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ಕಡಲೆಹಿಟ್ಟಿ ಬೂಂದಿ ಸ್ವಲ್ಪ
ದಾಳಿಂಬೆ ಬೀಜ – ಸ್ವಲ್ಪ
ಮಾಡುವ ವಿಧಾನ
ಉದ್ದಿನ ಬೇಳೆಯನ್ನು ಕನಿಷ್ಠ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೆನೆಸಿದ ಬೇಳೆಯನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಅಗತ್ಯವಿದ್ದರೆ, ಸ್ವಲ್ಪ ನೀರನ್ನು ಹಾಕಿ ನಯವಾಗಿ ರುಬ್ಬಿ.
ಈಗ ಒಂದು ಪಾತ್ರೆಯಲ್ಲಿ ರುಬ್ಬಿರುವ ಹಿಟ್ಟು, ನುಣ್ಣಗೆ ಕತ್ತರಿಸಿದ ಹಸಿಮೆಣಸು, ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಉದ್ದಿನ ಬೇಳೆಯ ಮಿಶ್ರಣವನ್ನು ಸಣ್ಣ ಉಂಡೆಗಳಂತೆ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಈ ವಡೆಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ಈಗ ಒಂದು ಬಟ್ಟಲಿನಲ್ಲಿ ದಪ್ಪ ಮೊಸರನ್ನು ತೆಗೆದುಕೊಂಡು, ಅದಕ್ಕೆ ಸಕ್ಕರೆ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊಸರು ಸ್ವಲ್ಪ ದಪ್ಪವಾಗಿರಬೇಕು ಮತ್ತು ತುಂಬಾ ತೆಳುವಾಗಿರಬಾರದು.
ಈಗ ಒಂದು ದೊಡ್ಡ ಬಟ್ಟಲಿನಲ್ಲಿ ತಣ್ಣೀರನ್ನು ತೆಗೆದುಕೊಂಡು, ಅದರಲ್ಲಿ ಹುರಿದ ವಡೆಗಳನ್ನು ಸೇರಿಸಿ. 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ನೆನೆಸಿದ ವಡೆಗಳನ್ನು ಒಂದೊಂದಾಗಿ ತೆಗೆದುಕೊಂಡು ಅವುಗಳನ್ನು ಎರಡೂ ಅಂಗೈಗಳ ಮಧ್ಯದಲ್ಲಿ ಇರಿಸಿ ನಿಧಾನವಾಗಿ ಒತ್ತಿ, ಹೆಚ್ಚುವರಿ ಎಣ್ಣೆಯನ್ನು ತೆಗೆಯಿರಿ. ಒತ್ತಿದ ಎಲ್ಲಾ ವಡೆಗಳನ್ನು ಒಂದು ತಟ್ಟೆಯಲ್ಲಿ ಹಾಕಿ, ಅದರ ಮೇಲೆ ಮೊಸರು ಹಾಕಿ. ಮಸಾಲೆಯುಕ್ತ ಚಟ್ನಿ ಮತ್ತು ಕೆಚಪ್ ಸಾಸ್‌ನಂತಹ ನಿಮಗೆ ಬೇಕಾದ ಸಿಹಿ ಚಟ್ನಿಗಳನ್ನು ಸೇರಿಸಿ.
ಕೊನೆಗೆ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ, ಬೂಂದಿ, ದಾಳಿಂಬೆಯನ್ನು ಹಾಕಿದರೆ ಮೊಸರು ವಡೆ ರೆಡಿ.