ಮಳೆಗಾಲದಲ್ಲಿ ಶೀತ, ಜ್ವರ, ಗಂಟಲು ನೋವು, ಕೆಮ್ಮು ಇತ್ಯಾದಿ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅತ್ಯಂತ ಮುಖ್ಯ. ಹೀಗಾಗಿ ಆರೋಗ್ಯ ಕಾಪಾಡುವುದರ ಜೊತೆಗೆ ದೇಹವನ್ನು ಬೆಚ್ಚಗಿಡಲು ಬೆಳ್ಳುಳ್ಳಿ ಸೂಪ್ ಉತ್ತಮ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಬೆಳ್ಳುಳ್ಳಿ
ಎಣ್ಣೆ
ಕಾರ್ನ್ ಫ್ಲೋರ್/ಜೋಳದ ಹಿಟ್ಟು
ಉಪ್ಪು
ಕಾಳುಮೆಣಸಿನ ಪುಡಿ
ಚಿಲ್ಲಿ ಫ್ಲೇಕ್ಸ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲು ಕಾರ್ನ್ ಫ್ಲೋರ್ಗೆ ಸ್ವಲ್ಪ ನೀರು ಸೇರಿಸಿ ಉಂಡೆಯಾಗದಂತೆ ಕಲಸಿ. ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣ ತುಂಡುಗಳಾಗಿ ಕತ್ತರಿಸಿದ ಹಸಿ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಒಂದೂವರೆ ಲೋಟ ನೀರು ಸೇರಿಸಿ ಕುದಿಯಲು ಬಿಡಿ. ಈ ನೀರು ಕುದಿಯುವಾಗ ಕಾರ್ನ್ ಫ್ಲೋರ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಕಾಳುಮೆಣಸಿನ ಪುಡಿ, ಉಪ್ಪು, ಚಿಲ್ಲಿ ಫ್ಲೇಕ್ಸ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಇನ್ನೂ ಒಂದು ನಿಮಿಷ ಕುದಿಸಿ. ನಂತರ ಸ್ಟವ್ ಆಫ್ ಮಾಡಿ ಬಿಸಿ ಬಿಸಿಯಾಗಿ ಸವಿಯಿರಿ.
ಮಳೆಗಾಲದಲ್ಲಿ ಬೆಳ್ಳುಳ್ಳಿ ಸೂಪ್ ಸೇವನೆಯು ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತಕರ. ಇದು ದೇಹದ ಉಷ್ಣತೆಯನ್ನು ಕಾಪಾಡುವುದರೊಂದಿಗೆ ಶೀತ, ಕೆಮ್ಮು ಮತ್ತು ಗಂಟಲು ನೋವು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಬಿಸಿ ಬಿಸಿ ಸೂಪ್ನ್ನು ಸಂಜೆಯ ಹೊತ್ತಿನಲ್ಲಿ ಸವಿದರೆ ಮನಸ್ಸಿಗೂ ದೇಹಕ್ಕೂ ಹಿತ.