ಡೊರೆಮನ್ ಕಾರ್ಟೂನ್ ನೋಡುವ ಮಕ್ಕಳು ಆಗಾಗ್ಗೆ ಕೇಳುವ ಹೆಸರು “ಡೋರಿಯಾಕಿ”! ಇದು ಜಪಾನೀಸ್ ಮಾದರಿಯ ಪ್ಯಾನ್ ಕೇಕ್ ಆಗಿದ್ದು, ಸಿಹಿಯಾದ ರೆಡ್ ಬಿನ್ ಪೇಸ್ಟ್ ಅಥವಾ ಜ್ಯಾಮ್ ಅನ್ನು ನಡುವೆ ಹಾಕಿ ತಯಾರಿಸಲಾಗುತ್ತದೆ. ಮಕ್ಕಳು ಮಾತ್ರವಲ್ಲದೆ, ದೊಡ್ಡವರು ಕೂಡ ಇಷ್ಟಪಡುವ ಈ ಸಿಹಿ ತಿನಿಸನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಮೈದಾ – 1 ಕಪ್
ಅಡಿಗೆ ಸೋಡಾ – 1 ಚಿಟಿಕೆ
ಬೇಕಿಂಗ್ ಪೌಡರ್ – 1/2 ಟೀಸ್ಪೂನ್
ಮೊಟ್ಟೆ – 2
ಸಕ್ಕರೆ – 1/2 ಕಪ್
ಹಾಲು – 1/4 ಕಪ್ (ಅವಶ್ಯಕತೆ ಇದ್ದರೆ)
ವೆನಿಲ್ಲಾ ಎಸೆನ್ಸ್ – 1 ಟೀಸ್ಪೂನ್
ಬೆಣ್ಣೆ – ಬೇಕಾದಷ್ಟು
ಜ್ಯಾಮ್ (ಸ್ಟ್ರಾಬೆರಿ ಅಥವಾ ಮಿಕ್ಸ್ ಫ್ರೂಟ್ಸ್)
ತಯಾರಿಸುವ ವಿಧಾನ:
ಮೊದಲು ಒಂದು ಬಟ್ಟಲಿನಲ್ಲಿ ಮೊಟ್ಟೆ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಾಫ್ಟ್ ಫೋಮ್ ಆಗುವವರೆಗೆ ಬೀಟ್ ಮಾಡಿ. ನಂತರ ಇದರಲ್ಲಿ ವೆನಿಲ್ಲಾ ಎಸೆನ್ಸ್ ಸೇರಿಸಿ ಕಲಸಿ.
ಇನ್ನೊಂದು ಬಟ್ಟಲಿನಲ್ಲಿ ಮೈದಾ, ಬೆಕ್ಕಿಂಗ್ ಪೌಡರ್ ಹಾಗೂ ಅಡಿಗೆ ಸೋಡಾ ಮಿಕ್ಸ್ ಮಾಡಿ ಮೊಟ್ಟೆ ಮಿಶ್ರಣದಲ್ಲಿ ಹಾಕಿ. ನಂತರ ಬೇಕಿದ್ದರೆ ಹಾಲು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಒಂದು ದೊಡ್ಡ ಚಮಚ ಬೆಣ್ಣೆ ಹಾಕಿ. ಈಗ ಪ್ಯಾನ್ ಕೇಕ್ ಹಿಟ್ಟನ್ನು ಒಂದು ಸೌಟ್ ಹಾಕಿ. ದೋಸೆಯಂತೆ ಸಾರಿಸಬೇಡಿ. ಹಾಗೆ ಇಟ್ಟು ಮುಚ್ಚಿ ಸ್ವಲ್ಪ ಹೊತ್ತು ಬೇಯಿಸಿ. ಎರಡು ಬದಿ ಚನ್ನಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿರಿ.
ಈಗ 1 ಪ್ಯಾನ್ ಕೇಕ್ ಮೇಲೆ ಜ್ಯಾಮ್ ಹರಡಿ ಇನ್ನೊಂದು ಪ್ಯಾನ್ ಕೇಕ್ ಅನ್ನು ಇಟ್ಟು ಮುಚ್ಚಿದರೆ ಡೋರಿಯಾಕಿ ಪ್ಯಾನ್ ಕೇಕ್ ರೆಡಿ.