ಮಧ್ಯಾಹ್ನದ ಊಟಕ್ಕೆ ಹೊಸದಾಗಿ ಏನಾದ್ರು ಟ್ರೈ ಮಾಡಬೇಕು ಅಂತಿದ್ದೀರಾ? ಹಾಗಾದ್ರೆ ಪನೀರ್ ಬಿರಿಯಾನಿ ಒಬ್ಬರಿಗೇನು ಅಲ್ಲ, ಇಡೀ ಕುಟುಂಬಕ್ಕೆ ಇಷ್ಟವಾಗುವ ವನ್‌ಪಾಟ್ ರೆಸಿಪಿ ಟ್ರೈ ಮಾಡಿ. ಸ್ವಲ್ಪ ಸಮಯ ಮೀಸಲಿಟ್ಟರೆ ಸಾಕು ಹೋಟೆಲ್ ಕ್ವಾಲಿಟಿಯ ಪನೀರ್ ಬಿರಿಯಾನಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ಪನೀರ್ – ಅರ್ಧ ಕೆಜಿ
ಅಕ್ಕಿ – 2 ಕಪ್
ತುಪ್ಪ – ಅರ್ಧ ಕಪ್
ಜೀರಿಗೆ – 1 ಚಮಚ
ಅಡುಗೆ ಎಣ್ಣೆ – 2 ಚಮಚ
ಈರುಳ್ಳಿ – 3 (ಸ್ಲೈಸ್ ಮಾಡಿ)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಚಕ್ಕೆ, ಏಲಕ್ಕಿ, ಲವಂಗ – ಸ್ವಲ್ಪ
ಪಲಾವ್ ಎಲೆ – 2
ಹಸಿಮೆಣಸು – 4
ಕ್ಯಾರೆಟ್ – 1 (ಚಿಕ್ಕದಾಗಿ ಕತ್ತರಿಸಿ)
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದಿನ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೊಳಗಿ, 15-20 ನಿಮಿಷಗಳವರೆಗೆ ನೆನೆಸಿಡಿ. ನಂತರ ಬಾಣಲೆಗೆ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಪನೀರ್ ತುಂಡುಗಳನ್ನು ಹಾಕಿ ಕೆಂಪಾಗುವವರೆಗೆ ಹುರಿದುಕೊಂಡು ಪ್ರತ್ಯೇಕವಾಗಿ ತೆಗೆದಿಡಿ.
ಇದಾದ ಮೇಲೆ, ಪ್ರೆಷರ್ ಕುಕ್ಕರ್‌ಗೆ ತುಪ್ಪ, ಚಕ್ಕೆ, ಏಲಕ್ಕಿ, ಲವಂಗ, ಪಲಾವ್ ಎಲೆ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಈರುಳ್ಳಿ ಸೇರಿಸಿ ಕಂದು ಬಣ್ಣವಾಗುವವರೆಗೆ ಹುರಿಯಿರಿ. ನಂತರ ಹಸಿಮೆಣಸು, ಕ್ಯಾರೆಟ್ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು.
ಈಗ ನೆನೆಸಿದ ಅಕ್ಕಿ, ಹುರಿದ ಪನೀರ್, ಕೊತ್ತಂಬರಿ ಹಾಗೂ ಪುದಿನ ಸೊಪ್ಪು ಸೇರಿಸಿ ನೀರು ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕುಕ್ಕರ್ ಮುಚ್ಚಿ 2 ಸೀಟಿ ಬಂದ ಮೇಲೆ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿದರೆ ಪನೀರ್ ಬಿರಿಯಾನಿ ರೆಡಿ.