ಸಿಹಿ ತಿನಿಸುಗಳನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ವಿಶೇಷವಾಗಿ ಮನೆಯಲ್ಲೇ ತಕ್ಷಣ ತಯಾರಿಸಬಹುದಾದ ಸಿಹಿಗಳು ಅಡುಗೆಗೆ ರುಚಿ ಹಾಗೂ ಮನಸ್ಸಿಗೆ ತೃಪ್ತಿ ನೀಡುತ್ತವೆ. ಇಂತಹ ಸಂದರ್ಭಗಳಲ್ಲಿ ಪೈನಾಪಲ್ ಶೀರಾ ಅತ್ಯುತ್ತಮ ಆಯ್ಕೆಯಾಗುತ್ತದೆ. ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಪದಾರ್ಥಗಳು:
ರವೆ – ಅರ್ಧ ಕಪ್
ಸಕ್ಕರೆ – ಅರ್ಧ ಕಪ್
ನೀರು – 1 ಕಪ್
ತುಪ್ಪ – 2 ಟೀಸ್ಪೂನ್
ಏಲಕ್ಕಿ – ¼ ಟೀಸ್ಪೂನ್
ಕೇಸರಿ – ಕೆಲವು ಎಳೆಗಳು
ಸಣ್ಣಗೆ ಹೆಚ್ಚಿದ ಅನನಾಸ್ – ¼ ಕಪ್
ಬೆಚ್ಚಗಿನ ಹಾಲು – 2 ಟೀಸ್ಪೂನ್
ಹೆಚ್ಚಿದ ಗೋಡಂಬಿ, ಬಾದಾಮಿ – 1 ಟೀಸ್ಪೂನ್
ಒಣ ದ್ರಾಕ್ಷಿ – 2 ಟೀಸ್ಪೂನ್
ಆಹಾರ ಬಣ್ಣ – ಚಿಟಿಕೆ
ಮಾಡುವ ವಿಧಾನ:
ಮೊದಲು ಬೆಚ್ಚಗಿನ ಹಾಲಿನಲ್ಲಿ ಕೇಸರಿ ಎಳೆಗಳನ್ನು ನೆನೆಸಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ, ಅದರಲ್ಲಿ ಅನಾನಸ್ ತುಂಡುಗಳನ್ನು ಕುದಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ, ಬಾದಾಮಿ ಹಾಗೂ ಒಣ ದ್ರಾಕ್ಷಿ ಹುರಿದು ಬದಿಗಿರಿಸಿ. ಅದೇ ಬಾಣಲೆಯಲ್ಲಿ ರವೆಯನ್ನು ಕಡಿಮೆ ಉರಿಯಲ್ಲಿ 5-6 ನಿಮಿಷ ಹುರಿದುಕೊಳ್ಳಿ.
ಬಳಿಕ ಅದಕ್ಕೆ ಏಲಕ್ಕಿ, ಕೇಸರಿ ಹಾಲು, ಅನನಾಸ್ ಕುದಿಸಿದ ನೀರು ಹಾಗೂ ಆಹಾರ ಬಣ್ಣ ಸೇರಿಸಿ. ಗಂಟಾಗದಂತೆ ಬೆರೆಸಿ ಒಂದು ನಿಮಿಷ ಬೇಯಿಸಿ. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ 2 ನಿಮಿಷ ಬೇಯಿಸಿ. ಕೊನೆಗೆ ತುಪ್ಪದಲ್ಲಿ ಹುರಿದ ಬೀಜಗಳನ್ನು ಸೇರಿಸಿ.