ಗರಿಗರಿಯಾದ ಕೋಡುಬಳೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ. ಸಂಜೆ ಚಹಾ ಹೀರುತ್ತಾ ಒಂದೊಂದೇ ತಿನ್ನುತ್ತಿದರೆ ಅದ್ರ ಮಜಾನೇ ಬೇರೆ. ಇವತ್ತು ಸಿಂಪಲ್ ಕೋಡುಬಳೆ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು- 1 ಕಪ್
ಚಿರೋಟಿ ರವೆ- ಕಾಲು ಕಪ್
ಮೈದಾ ಹಿಟ್ಟು- 2 ಚಮಚ
ತೆಂಗಿನಕಾಯಿ ತುರಿ- 3 ಚಮಚ
ಹುರಿಗಡಲೆ ಪುಡಿ- 2 ಚಮಚ
ಜೀರಿಗೆ- 2 ಚಮಚ
ಎಳ್ಳು- 1 ಚಮಚ
ಬೆಳ್ಳುಳ್ಳಿ- 5
ಇಂಗು- ಚಿಟಿಕೆ
ಎಣ್ಣೆ- 5 ಚಮಚ
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಅಚ್ಚಖಾರದ ಪುಡಿ- 4 ಚಮಚ
ಕರಿಬೇವು- 15 ಎಲೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಅಚ್ಚಖಾರದ ಪುಡಿ, ಕರಿಬೇವು, 1 ಚಮಚ ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಚಿರೋಟಿ ರವೆ ಹಾಕಿ ನಾಲ್ಕರಿಂದ ಐದು ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಇದನ್ನು ಒಂದು ತಟ್ಟೆಗೆ ಎತ್ತಿಡಿ. ಈ ಮಿಶ್ರಣಕ್ಕೆ ಉಪ್ಪು, 1 ಚಮಚ ಜೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಎಣ್ಣೆಯನ್ನು ಬಿಸಿ ಮಾಡಿ. ಈ ಬಿಸಿ ಎಣ್ಣೆಯನ್ನು ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಚಿರೋಟಿ ರವೆ ಮಿಶ್ರಣಕ್ಕೆ ಬೆರೆಸಿ. ಜೊತೆಗೆ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ನೀರು ಹಾಕಬಹುದು. ಚಪಾತಿ ಹದದಷ್ಟು ಮಿಶ್ರಣ ತಯಾರಿಸಬೇಕು.
ನಂತರ ಸಣ್ಣ ಉಂಡೆಯನ್ನು ತೆಗೆದುಕೊಂಡು ಉದ್ದಕ್ಕೆ ಲಟ್ಟಿಸಿ, ಉಂಗುರದಂತೆ ಮಾಡಿ. ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಕೋಡುಬಳೆ ರೆಡಿ.