ಚಿಕನ್ ಸಾಂಬಾರು ಮತ್ತು ಬಿರಿಯಾನಿಗಳಷ್ಟೇ ಅಲ್ಲದೆ, ವಿಭಿನ್ನ ರುಚಿಗಳನ್ನು ಹೊಂದಿರುವ ಹಲವು ಚಿಕನ್ ಡಿಶ್ ಗಳನ್ನೂ ಮನೆಯಲ್ಲಿ ಮಾಡಿ ಸವಿಯಬಹುದು. ಅದರಲ್ಲಿ ಸೋಯಾ ಚಿಕನ್ ಕೂಡ ಒಂದು. ವಿಶೇಷವಾದ ಮತ್ತು ತೀರಾ ಸರಳವಾದ ರೆಸಿಪಿ.
ಬೇಕಾಗುವ ಸಾಮಗ್ರಿಗಳು:
ಚಿಕನ್ – ½ ಕೆಜಿ
ಸೋಯಾ ಸಾಸ್ – 5 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಖಾರದ ಪುಡಿ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಒಂದು ಚಿಟಿಕೆ
ಮಾಡುವ ವಿಧಾನ:
ಮೊದಲಿಗೆ ಚಿಕನ್ ತುಂಡುಗಳನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. (ಗಮನಿಸಿ: ಸೋಯಾ ಸಾಸ್‌ನಲ್ಲಿ ಉಪ್ಪು ಇದ್ದುದರಿಂದ ಉಪ್ಪಿನ ಪ್ರಮಾಣ ಕಡಿಮೆ ಇಡಿ)
ಈ ಮಿಶ್ರಣವನ್ನು ಒಂದು ಗಂಟೆ ಫ್ರಿಡ್ಜ್‌ನಲ್ಲಿ ನೆನೆಸಲು ಬಿಡಿ.
ನಂತರ ಫ್ರಿಡ್ಜ್‌ನಿಂದ ತೆಗೆದು 10 ನಿಮಿಷ ರೂಂ ಟೆಂಪರೇಚರ್‌ನಲ್ಲಿ ಇಡಿ. (ಫ್ರಿಡ್ಜ್‌ನಿಂದ ತೆಗೆದ ಪದಾರ್ಥಗಳನ್ನು ತಕ್ಷಣವೇ ಬೇಯಿಸಬೇಡಿ). ಒಂದು ಪ್ಯಾನ್‌ಗೆ ಸಕ್ಕರೆ ಹಾಕಿ ಅದು ಕರಗಿದ ನಂತರ ನೆನೆಸಿದ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬೇಯುವಾಗ ಎಣ್ಣೆ ಹಾಕುವ ಅಗತ್ಯವಿಲ್ಲ. ಬೇಕಾದಲ್ಲಿ ಸ್ವಲ್ಪ ನೀರು ಚುಮುಕಿಸಬಹುದು.
ನೀರು ಸಂಪೂರ್ಣ ಇಂಗುವವರೆಗೂ ಆಗಾಗ ಕೈಯಾಡಿಸುತ್ತಾ ಫ್ರೈ ಮಾಡಿದರೆ, ಬಿಸಿ ಬಿಸಿ ಸೋಯಾ ಚಿಕನ್ ಸಿದ್ಧ.