ಬೆಳಗ್ಗೆ ಬೆಳಗ್ಗೆನೇ ಜಂಕ್ ಫುಡ್ ಹೊಟ್ಟೆಗೆ ಹಾಕೊಂಡ್ರೆ ಇಡೀ ದಿನ ಎನರ್ಜಿನೇ ಇರಲ್ಲ. ಜಡತ್ವ ಅನ್ನಿಸುತ್ತೆ. ಅದಿಕ್ಕೆ ಬೆಳಗ್ಗಿನ ಉಪಹಾರಕ್ಕೆ ಆರೋಗ್ಯಕರವಾಗಿರುವ ಕರಿಬೇವಿನ ಎಲೆಯ ಚಿತ್ರಾನ್ನ ಟ್ರೈ ಮಾಡಿ.
ಬೇಕಾಗುವ ಸಾಮಾಗ್ರಿಗಳು:
ಅನ್ನ- ಎರಡು ಕಪ್
ಎಣ್ಣೆ- ಮೂರು ಚಮಚ
ಕರಿಬೇವಿನ ಎಲೆ- ಒಂದು ಕಪ್
ಸಾಸಿವೆ- ಮೂರು ಚಮಚ
ಜೀರಿಗೆ- ಒಂದು ಚಮಚ
ಕಡಲೆಬೇಳೆ- ಒಂದು ಚಮಚ
ಉದ್ದಿನ ಬೇಳೆ – ಒಂದು ಚಮಚ
ಕಡಲೆಕಾಯಿ- ¼ ಕಪ್
ಒಣಮೆಣಸಿನಕಾಯಿ- ಐದು
ಹಸಿಮೆಣಸಿನಕಾಯಿ- ಐದು
ಹುಣಸೆಹಣ್ಣು- ನಿಂಬೆ ಹಣ್ಣಿನ ಗಾತ್ರ
ಉಪ್ಪು ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ ಎಸಳು- ಎರಡು
ಅರಿಶಿನ- 1 ಟೀಚಮಚ
ಇಂಗು- ಚಿಟಿಕೆ
ಮಾಡುವ ವಿಧಾನ:
ಕರಿಬೇವಿನ ಎಲೆಯ ಚಿತ್ರಾನ್ನವನ್ನು ಉಳಿದಿರುವ ಅನ್ನದಿಂದಲೂ ತಯಾರಿಸಬಹುದು.
ಈಗ ಕಡಾಯಿಗೆ ಎಣ್ಣೆ ಹಾಕಿ. ಒಂದು ಕಪ್ ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸರ್ ಜಾರ್‌ನಲ್ಲಿ ಹಾಕಿ. ಇದಕ್ಕೆ ಎರಡು ಚಮಚ ಸಾಸಿವೆ ಮತ್ತು ಎರಡು ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ರುಬ್ಬಿಕೊಳ್ಳಿ.
ಈಗ ಅದೇ ಕಡಾಯಿಗೆ ಎಣ್ಣೆ, ಒಂದು ಚಮಚ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿಯನ್ನು, ಸ್ವಲ್ಪ ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಹುರಿಯಿರಿ.
ನಂತರ ರುಬ್ಬಿರುವ ಕರಿಬೇವಿನ ಎಲೆಯ ಮಿಶ್ರಣ ಹಾಗೂ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹುಣಸೆಹಣ್ಣನ್ನು ಮುಂಚಿತವಾಗಿ ನೆನೆಸಿ ಅದರ ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಿಟಿಕೆ ಶುಂಠಿಯನ್ನು ಬೆರಿಸಿ, ಮಿಶ್ರಣವನ್ನು ಹುರಿಯಿರಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ಟೌವ್ ಆಫ್ ಮಾಡಿ.
ಈ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಪುಳಿಯೋಗರೆ ಮಿಶ್ರಣ ಮಾಡುವಂತೆ ಚೆನ್ನಾಗಿ ಕಲಸಿದರೆ ಕರಿಬೇವಿನ ಎಲೆ ಚಿತ್ರಾನ್ನ ತಿನ್ನಲು ಸಿದ್ಧ.