ಮೊಟ್ಟೆ ಪ್ರೋಟೀನ್ ಮೂಲವಾದ ಆಹಾರವಾಗಿದೆ. ದಿನದ ಯಾವುದೇ ಸಮಯದಲ್ಲಿ ತಿನ್ನಬಹುದಾದ ಈ ಬಹುಪಯೋಗಿ ಮೊಟ್ಟೆಯಿಂದ ಹಲವಾರು ತಿಂಡಿ ತಿನಿಸುಗಳನ್ನು ತಯಾರಿಸಬಹುದು. ಅದರಲ್ಲಿ ಎಗ್ 65 ವಿಶೇಷ. ಈ ತಿಂಡಿಯನ್ನು ಮನೆಯಲ್ಲೇ ತಯಾರಿಸಬಹುದು. ಹೇಗೆ ನೋಡೋಣ.
ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ ಮೊಟ್ಟೆ – 3 (4 ಭಾಗಗಳಾಗಿ ಕತ್ತರಿಸಿ)
ಮೆಣಸಿನ ಪುಡಿ – 1 ಟೀಸ್ಪೂನ್
ಕಡಲೆ ಹಿಟ್ಟು – 2.5 ಟೀಸ್ಪೂನ್
ಹೆಚ್ಚಿದ ಹಸಿರು ಮೆಣಸು – 2 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
ಹೆಚ್ಚಿದ ಶುಂಠಿ – 1 ಟೀಸ್ಪೂನ್
ಕಾಳು ಮೆಣಸಿನ ಪುಡಿ – 1/4 ಟೀಸ್ಪೂನ್
ಉಪ್ಪು ಮತ್ತು ಸ್ವಲ್ಪ ನೀರು – ಅಗತ್ಯವಿದ್ದಷ್ಟು
ಮಸಾಲೆಗೆ:
ಎಣ್ಣೆ – 1 ಟೀಸ್ಪೂನ್
ಕರಿಬೇವು – 8 ಎಲೆ
ಒಣ ಕೆಂಪು ಮೆಣಸು – 1
ಹೆಚ್ಚಿದ ಶುಂಠಿ, ಬೆಳ್ಳುಳ್ಳಿ – ತಲಾ 1 ಟೀಸ್ಪೂನ್
ಹಸಿರು ಮೆಣಸು – 1
ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್
ಗರಂ ಮಸಾಲೆ – 1/2 ಟೀಸ್ಪೂನ್
ಟೊಮಾಟೊ ಕೆಚಪ್ – 3 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕರಣಕ್ಕೆ
ಮಾಡುವ ವಿಧಾನ:
ಮೊದಲಿಗೆ, ಬೌಲಿನಲ್ಲಿ ಮೆಣಸಿನ ಪುಡಿ, ಕಡಲೆ ಹಿಟ್ಟು, ಶುಂಠಿ, ಬೆಳ್ಳುಳ್ಳಿ, ಮೆಣಸು, ಉಪ್ಪು, ಕಾಳು ಮೆಣಸು ಹಾಗೂ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ತಯಾರಿಸಿ. ಈ ಮಿಶ್ರಣಕ್ಕೆ ಬೇಯಿಸಿ ಕತ್ತರಿಸಿದ ಮೊಟ್ಟೆಗಳನ್ನು ಈ ಮೊಟ್ಟೆಗಳನ್ನು ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೂ ಫ್ರೈ ಮಾಡಿ.
ಮತ್ತೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕರಿಬೇವಿನ ಎಲೆ, ಒಣ ಮೆಣಸು, ಹಸಿರು ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಗರಂ ಮಸಾಲೆ, ಕೆಂಪು ಮೆಣಸಿನ ಪುಡಿ ಸೇರಿಸಿ, ನಂತರ ಕೆಚಪ್ ಹಾಕಿ ಮಿಕ್ಸ್ ಮಾಡಿ. ಈಗ ಫ್ರೈ ಮಾಡಿದ ಮೊಟ್ಟೆಗಳನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಎಗ್ 65 ರೆಡಿ.