ಸಂಜೆಯಾಗುತ್ತಿದಂತೆ ಕಾಫಿ ಜೊತೆಗೆ ಏನಾದ್ರು ತಿನ್ನಲು ಬೇಕು ಅಂತ ಅನ್ನಿಸೋದು ಸಹಜ ಅಲ್ವಾ ಹೀಗಾಗಿ ಇವತ್ತು ನಾವು ಗರಿಗರಿಯಾದ ಮತ್ತು ಕುರುಕುಲಾದ ಸಬ್ಬಕ್ಕಿ ಪಕೋಡ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು
ಸಬ್ಬಕ್ಕಿ- ಅರ್ಧ ಕಪ್
ಆಲೂಗಡ್ಡೆ- ಎರಡು
ಕಡಲೆಬೇಳೆ- ಕಾಲು ಕಪ್
ಮೆಣಸಿನ ಪುಡಿ- ಎರಡು ಟೀ ಚಮಚ
ಜೀರಿಗೆ- ಅರ್ಧ ಟೀ ಚಮಚ
ಕೊತ್ತಂಬರಿ ಪುಡಿ- ಕಾಲು ಕಪ್
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಕರಿಯಲು
ಮಾಡುವ ವಿಧಾನ
ಮೊದಲಿಗೆ ಸಬ್ಬಕ್ಕಿಯನ್ನು ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಿ. ಈಗ ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಅದಕ್ಕೆ ಪುಡಿ ಮಾಡಿದ ಸಬ್ಬಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಕಡಲೆಬೇಳೆಯನ್ನು ಮಿಕ್ಸರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಜತೆಗೆ ಹಸಿರು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈಗ ಸಬ್ಬಕ್ಕಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ ಉಂಡೆಗಳಂತೆ ಮಾಡಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದರೆ ರುಚಿಕರವಾದ ಸಬ್ಬಕ್ಕಿ ಪಕೋಡ ಸವಿಯಲು ಸಿದ್ಧ.