ಮಹಾರಾಷ್ಟ್ರದ ಕೊಲ್ಲಾಪುರ ಭಾಗದ ಆಹಾರದ ವಿಶೇಷತೆ ಎಂದರೆ ಮಸಾಲೆ, ತೆಂಗಿನಕಾಯಿ ಸುವಾಸನೆ ಮತ್ತು ಖಾರದ ಸಮತೋಲನ. ಅವೆಲ್ಲವೂ ನಾವು ಇವತ್ತು ಹೇಳ್ತಿರೋ ಕೊಲ್ಲಾಪುರ ಸ್ಟೈಲ್ ಮಿಕ್ಸ್ ವೆಜ್ ಕರಿಯಲ್ಲಿ ನಿಮಗೆ ಸಿಗುತ್ತೆ. ಈ ಕರಿ ಅನ್ನ, ಜೋಳದ ರೊಟ್ಟಿ, ಭಾಕ್ರಿ ಅಥವಾ ಚಪಾತಿಯೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮನೆಯಲ್ಲೇ ಸಿಗುವ ತರಕಾರಿಗಳಿಂದ, ಹೋಟೆಲ್ ಸ್ಟೈಲ್ ರುಚಿಯಲ್ಲಿ ತಯಾರಿಸಬಹುದಾದ ಈ ರೆಸಿಪಿ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಹೂ ಕೋಸು, ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆ – ಸಣ್ಣ ತುಂಡುಗಳು, ಈರುಳ್ಳಿ, ಟೊಮೇಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಎಣ್ಣೆ, ಉಪ್ಪು, ಒಣ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಒಣ ಕೆಂಪು ಮೆಣಸಿನಕಾಯಿ, ಲವಂಗ, ದಾಲ್ಚಿನ್ನಿ, ಗಸಗಸೆ.
ಮಾಡುವ ವಿಧಾನ:
ಮೊದಲು ಪ್ಯಾನ್‌ನಲ್ಲಿ ಮಸಾಲೆಗೆ ಬೇಕಾದ ಪದಾರ್ಥಗಳನ್ನು ಸ್ವಲ್ಪ ಎಣ್ಣೆಯಲ್ಲಿ ಸುವಾಸನೆ ಬರುವವರೆಗೆ ಹುರಿದು ತಣ್ಣಗಾದ ನಂತರ ನಯವಾಗಿ ಅರೆದುಕೊಳ್ಳಿ. ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಗೋಲ್ಡನ್ ಆಗುವವರೆಗೆ ಹುರಿಯಿರಿ. ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ನಂತರ ಟೊಮೇಟೊ ಸೇರಿಸಿ. ಈಗ ತಯಾರಿಸಿದ ಕೊಲ್ಲಾಪುರ ಮಸಾಲೆ ಹಾಕಿ ಚೆನ್ನಾಗಿ ಕಲಸಿ ಎಣ್ಣೆ ಬಿಡುವವರೆಗೆ ಬೇಯಿಸಿ. ತರಕಾರಿಗಳು, ಉಪ್ಪು ಹಾಗೂ ಬೇಕಾದಷ್ಟು ನೀರು ಸೇರಿಸಿ ಕುಕ್ಕರ್‌ನಲ್ಲಿ 2–3 ಸಿಟಿ ಕೊಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಸವಿಯಿರಿ.

