July 4, 2026
Saturday, July 4, 2026
spot_img

ಸಾರಾಯಿ ಮತ್ತಿನಲ್ಲಿ ಸವಾರನ ಸರ್ಕಸ್: ಅಂಕೋಲಾದಲ್ಲಿ ಓವರ್‌ಲೋಡ್ ಲಾರಿ ಸೀಜ್

ಹೊಸದಿಗಂತ ಅಂಕೋಲಾ:

ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮದೂತನಂತೆ ಲಾರಿ ಚಲಾಯಿಸುತ್ತಿದ್ದ ಚಾಲಕನನ್ನ ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಕಾರವಾರದ ಕಡೆಗೆ ಕೋಕ್ (Coke) ಸಾಗಿಸುತ್ತಿದ್ದ ಲಾರಿಯನ್ನು ಚಾಲಕ ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದನು.

ರಸ್ತೆಯ ಎಡಭಾಗದಲ್ಲಿ ಸಾಗಬೇಕಿದ್ದ ಲಾರಿ, ಪದೇ ಪದೇ ಬಲಬದಿಗೆ ನುಗ್ಗುತ್ತಿರುವುದನ್ನು ಗಮನಿಸಿದ ಹೆದ್ದಾರಿ ಗಸ್ತು ಪಡೆಯ ಎಎಸ್‌ಐ ದೇವಿದಾಸ್ ಚಾಪೋಲೆಕರ್, ಎಕ್ಕೆಗುಳಿ ಕ್ರಾಸ್ ಬಳಿ ಲಾರಿಯನ್ನು ತಡೆದಿದ್ದಾರೆ. ಈ ವೇಳೆ ನಡೆಸಿದ ತಪಾಸಣೆಯಲ್ಲಿ ಚಾಲಕನ ಅಸಲಿ ಬಣ್ಣ ಬಯಲಾಗಿದೆ.

ಅಲ್ಕೋಮೀಟರ್ ಪರೀಕ್ಷೆ ನಡೆಸಿದಾಗ ಚಾಲಕ 100 ML ಗಿಂತ ಹೆಚ್ಚು ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಹೆಚ್ಚಿನ ವೈದ್ಯಕೀಯ ಪರೀಕ್ಷೆಯಲ್ಲಿ ಚಾಲಕ ಕೇವಲ ಮದ್ಯವಲ್ಲದೆ, ಮಾದಕ ವಸ್ತುವನ್ನು ಕೂಡ ಸೇವಿಸಿರುವುದು ಬೆಳಕಿಗೆ ಬಂದಿದೆ.

ಲಾರಿಯಲ್ಲಿ ನಿಗದಿತ ಮಿತಿಗಿಂತ ಬರೋಬ್ಬರಿ 2,760 ಕೆಜಿ ಹೆಚ್ಚಿನ ತೂಕದ ಸರಕನ್ನು ಹೇರಲಾಗಿತ್ತು.

ಬಂಧಿತ ಚಾಲಕನನ್ನು ಬಾಗಲಕೋಟೆ ಮೂಲದ ಸಂಗಪ್ಪ ಎಂದು ಗುರುತಿಸಲಾಗಿದ್ದು, ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !