ಮನೆಯವರಿಗಾಗಿ ಪ್ರತಿದಿನ ವಿಭಿನ್ನ ರೀತಿಯ ಅಡುಗೆಯನ್ನು ತಯಾರಿಸುವುದು ಅನೇಕ ಗೃಹಿಣಿಯರ ಆಸೆ. ವಿಶೇಷವಾಗಿ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರವನ್ನು ತಯಾರಿಸಲು ಎಲ್ಲರೂ ಬಯಸುತ್ತಾರೆ. ಇತ್ತೀಚೆಗೆ ಪೌಷ್ಠಿಕ ಆಹಾರಗಳಲ್ಲಿ ಮಜ್ಜಿಗೆ ಇಡ್ಲಿ ಹೆಚ್ಚು ಜನಪ್ರಿಯವಾಗಿದ್ದು, ಹಿತವಾದ ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಇಡ್ಲಿ, ವಿಶೇಷವಾಗಿ ಹೊಟ್ಟೆಗೆ ಹಿತವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಅಕ್ಕಿರವೆ – 1 ಕಪ್
ಶುಂಠಿ – 2 ಚಮಚ
ಈರುಳ್ಳಿ – 1
ಹಸಿಮೆಣಸು – 1
ಸ್ವಲ್ಪ ಕರಿಬೇವು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಸಾಸಿವೆ – 1 ಚಮಚ
ಕಡ್ಲೆ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಅರಶಿಣ ಪುಡಿ – 1 ಚಮಚ
ಇಂಗು- ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಜ್ಜಿಗೆ – 2 ಕಪ್
ಮಾಡುವ ವಿಧಾನ:
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಕಡ್ಲೆಬೇಳೆ ಹಾಗೂ ಉದ್ದಿನ ಬೇಳೆ ಸೇರಿಸಿ ಒಗ್ಗರಣೆಯನ್ನು ಮಾಡಬೇಕು. ಬಳಿಕ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಅರಶಿಣ ಪುಡಿ ಸೇರಿಸಿ ಸ್ವಲ್ಪ ಕಾಲ ಹುರಿಯಬೇಕು. ನಂತರ ಅಕ್ಕಿರವೆ ಸೇರಿಸಿ ಸುಮಾರು ಎರಡು ನಿಮಿಷ ಹುರಿಯಬೇಕು.
ಹುರಿದ ಮಿಶ್ರಣಕ್ಕೆ ಉಪ್ಪು, ಬೇಕಾದಷ್ಟು ನೀರು ಮತ್ತು ದಪ್ಪ ಮಜ್ಜಿಗೆಯನ್ನು ಸೇರಿಸಿ ಇಡ್ಲಿಯ ಹದಕ್ಕೆ ಚೆನ್ನಾಗಿ ಕಲಸಿಕೊಂಡು ಸ್ವಲ್ಪ ಹೊತ್ತು ಕುದಿಯಲು ಬಿಡಬೇಕು. ಈ ಮಿಶ್ರಣವನ್ನು ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ಮಜ್ಜಿಗೆ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.