ಮನೆಯಲ್ಲೇ ಗರಿಗರಿಯಾದ ಚಿಕನ್ ಪಾಪ್‌ಕಾರ್ನ್ ಮಾಡೋದು ತುಂಬಾನೇ ಸುಲಭ. ಇಲ್ಲಿದೆ ನೋಡಿ ವಿಧಾನ:
ಬೇಕಾಗುವ ಸಾಮಗ್ರಿಗಳು:
250 ಗ್ರಾಂ – ಮೂಳೆ ಇಲ್ಲದ ಚಿಕನ್
1/2 ಕಪ್ – ಮೈದಾ ಹಿಟ್ಟು
1/4 ಕಪ್ – ಕಾರ್ನ್‌ಫ್ಲೋರ್
1 ಚಮಚ – ಶುಂಠಿ-ಬೆಳ್ಳುಳ್ಳಿ ಪೇಸ್ಟ್
1/2 ಚಮಚ – ಗರಂ ಮಸಾಲ
1/2 ಚಮಚ – ಕೆಂಪು ಮೆಣಸಿನ ಪುಡಿ
1/4 ಚಮಚ – ಕಾಳು ಮೆಣಸಿನ ಪುಡಿ
ಚಿಟಿಕೆ – ಅರಿಶಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಕೆಂಪು ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪನ್ನು ಚಿಕನ್‌ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಬಿಡಿ. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ಕಾರ್ನ್‌ಫ್ಲೋರ್ ಅನ್ನು ಮಿಶ್ರಣ ಮಾಡಿ. ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಒಂದೊಂದಾಗಿ ತೆಗೆದು ಮೈದಾ-ಕಾರ್ನ್‌ಫ್ಲೋರ್ ಮಿಶ್ರಣದಲ್ಲಿ ಚೆನ್ನಾಗಿ ಲೇಪಿಸಿ. ಹಿಟ್ಟು ಚೆನ್ನಾಗಿ ಅಂಟಿಕೊಳ್ಳುವಂತೆ ನೋಡಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ ಲೇಪಿತ ಚಿಕನ್ ತುಂಡುಗಳನ್ನು ನಿಧಾನವಾಗಿ ಹಾಕಿ. ಚಿಕನ್ ತುಂಡುಗಳು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿಯಿರಿ. ಕರಿದ ಚಿಕನ್ ಪಾಪ್‌ಕಾರ್ನ್ ಅನ್ನು ಒಂದು ಪ್ಲೇಟ್‌ಗೆ ತೆಗೆದು ಕೊಳ್ಳಿ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಟಿಶ್ಯೂ ಪೇಪರ್ ಅನ್ನು ಬಳಸಿ. ಗರಿಗರಿಯಾದ ಚಿಕನ್ ಪಾಪ್‌ಕಾರ್ನ್ ಈಗ ಸವಿಯಲು ಸಿದ್ಧ. ಟೊಮೆಟೊ ಕೆಚಪ್ ಅಥವಾ ನಿಮ್ಮಿಷ್ಟದ ಡಿಪ್ ಜೊತೆ ಬಿಸಿ ಬಿಸಿಯಾಗಿ ತಿಂದು ಆನಂದಿಸಿ.