ಹೊಸದಿಗಂತ ಡಿಜಿಟಲ್ ಡೆಸ್ಕ್:
ಪನೀರ್ ಬುರ್ಜಿ ಉತ್ತರ ಭಾರತೀಯ ಖಾದ್ಯಗಳಲ್ಲಿ ಪ್ರಸಿದ್ಧವಾದ ಒಂದು ಟೇಸ್ಟಿ ಮತ್ತು ಆರೋಗ್ಯಕರ ವ್ಯಂಜನ. ಪನೀರ್ ಅನ್ನು ಸುಲಭವಾಗಿ ಮಸಾಲೆಗಳಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಹಾಗಾದರೆ, ಈ ರುಚಿಕರವಾದ ಪನೀರ್ ಬುರ್ಜಿಯನ್ನು ಹೇಗೆ ಮಾಡುವುದು ಎನ್ನುವುದನ್ನು ನೋಡೋಣ!
ಬೇಕಾಗುವ ಸಾಮಗ್ರಿಗಳು:
ಎಣ್ಣೆ- 2 ಚಮಚ
ಜೀರಿಗೆ- 1 ಚಮಚ
ಈರುಳ್ಳಿ- 1 ಸಣ್ಣಗೆ ಹೆಚ್ಚಿದ್ದು
ಉಪ್ಪು- ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ- 1 ಸಣ್ಣಗೆ ಹೆಚ್ಚಿದ್ದು
ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಅಚ್ಚಖಾರದ ಪುಡಿ- ಅರ್ಧ ಚಮಚ
ಟೊಮೆಟೋ- 1 ಸಣ್ಣಗೆ ಹೆಚ್ಚಿದ್ದು
ಅರಿಶಿನ- ಸ್ವಲ್ಪ
ಗರಂ ಮಸಾಲಾ- ಅರ್ಧ ಚಮಚ
ಪನೀರ್- 2 ಕಪ್ ನಷ್ಟು ಸಣ್ಣಗೆ ಪುಡಿಪುಡಿ ಮಾಡಿದ್ದು
ಕಸೂರಿ ಮೇಥಿ- 1 ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ.
ನಂತರ ಹೆಚ್ಚಿದ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಅಚ್ಚಖಾರದ ಪುಡಿ, ಅರಿಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದನ್ನು ಸಣ್ಣ ಉರಿಯಲ್ಲಿ 1 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ.
ನಂತರ ಪುಡಿ ಮಾಡಿಟ್ಟುಕೊಂಡ ಪನೀರ್ ಹಾಕಿ. ಪನೀರ್ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ತಿರುವಿ. ಸಣ್ಣ ಉರಿಯಲ್ಲಿ ಸುಮಾರು 3 ನಿಮಿಷ ಬಿಡಿ. ನಂತರ ಕಸೂರಿ ಮೇಥಿ, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪನೀರ್ ಬುರ್ಜಿ ಸವಿಯಲು ಸಿದ್ಧ.