ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ಹುಲಿದೇವರವಾಡದ ಓಣಿಯೊಂದರಲ್ಲಿ ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಾವಿಯ ಸಮೀಪ ಕಳೆದ ಇಪ್ಪತ್ತು ದಿನಗಳಿಂದ ರಾತ್ರಿ ಸಮಯದಲ್ಲಿ ವಿಚಿತ್ರವಾಗಿ ಕಾಲ್ಗೆಜ್ಜೆ ಸಪ್ಪಳ ಕೇಳಿ ಬರುತ್ತಿದ್ದು ,ಸುತ್ತ ಮುತ್ತಲಿನ ನಿವಾಸಿಗಳು ಭಯಭೀತರಾಗಿ ನಿದ್ದೆಯಿಲ್ಲದ ರಾತ್ರಿ ಕಳೆಯುವಂತಾಗಿದೆ.
ಬಾವಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹತ್ತಾರು ಮನೆಗಳಿದ್ದು ಬೇರೆ ಬೇರೆ ಧರ್ಮಗಳಿಗೆ ಸೇರಿದ ಕುಟುಂಬಗಳು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ.
ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಪಾಳು ಬಿದ್ದ ಬಾವಿಯನ್ನು ಸಂಬಂಧಿಸಿದ ವ್ಯಕ್ತಿಯೋರ್ವರು ಇತ್ತೀಚೆಗೆ ಸರಿಪಡಿಸಿ ಸ್ವಚ್ಛಗೊಳಿಸಿದ್ದು ಇದೀಗ ಬಾವಿಯಲ್ಲಿ ನೀರು ಸಹ ತುಂಬಿದೆ.
ಈ ನಡುವೆ ಕಳೆದ ಕೆಲವು ದಿನಗಳಿಂದ ರಾತ್ರಿ 11 ಗಂಟೆಯ ನಂತರ ಬಾವಿಯ ಬಳಿ ಜೋರಾಗಿ ಗೆಜ್ಜೆ ಸಪ್ಪಳ ಕೇಳಿ ಬರುತ್ತಿದ್ದು ಈ ಸದ್ದಿನಿಂದ ನಾಯಿಗಳು ಬೊಗಳಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರಾತ್ರಿ ಸಮಯದಲ್ಲಿ ಈ ರೀತಿಯ ಗೆಜ್ಜೆ ಶಬ್ದ ಯಾಕೆ ಬರುತ್ತಿದೆ? ಇದು ದೈವಿ ಶಕ್ತಿಯೋ,ಪಿಶಾಚಿಗಳ ಕಾಟವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎನ್ನುವುದು ತಿಳಿಯದಾಗಿದೆ ಮಕ್ಕಳು ಮನೆಯಲ್ಲಿ ಉಳಿಯಲು ಹೆದರುತ್ತಿದ್ದಾರೆ ಎಂದು ಇಲ್ಲಿನ ನಾಗರಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ಸ್ಥಳೀಯ ಸದಸ್ಯ ಶಬ್ಬೀರ ಶೇಖ್ ಸಹ ಈ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದು ಘಟನೆಗೆ ಸಂಬಂಧಿಸಿದಂತೆ ನಿಜಾಂಶ ಬೆಳಕಿಗೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸಮಯದಲ್ಲಿ ಕೇಳಿ ಬರುವ ಗೆಜ್ಜೆ ಶಬ್ದದ ಕುರಿತು ನಾನಾ ರೀತಿಯ ಮಾತುಗಳು ಕೇಳಿ ಬರುತೊಡಗಿದ್ದು ಪ್ರೇತಾತ್ಮದ ಕಾಟ, ಭಾನಾಮತಿಯ ತೊಂದರೆ ಹೀಗೆ ಸುದ್ದಿ ಹರಡತೊಡಗಿದೆ.
ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ಹುಲಿದೇವರವಾಡದ ಜನರ ಆತಂಕ ಹೋಗಲಾಡಿಸಬೇಕಿದೆ.