ಹೊಸ ದಿಗಂತ ವರದಿ, ಕೆ.ಆರ್. ಪೇಟೆ :
ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮದ ಶೋಭ ಎಂಬುವರ ಮನೆಯ ಹೊರ ಭಾಗದಲ್ಲಿ ಕಟ್ಟಿಹಾಕಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ವೌಲ್ಯದ ಮೇಕೆಯನ್ನು ಚಿರತೆ ದಾಳಿ ನಡೆಸಿ ತಿಂದು ಹಾಕಿದೆ.
ಈ ಗ್ರಾಮದಲ್ಲಿ ಚಿರತೆ ದಾಳಿ ನಡೆಸುತ್ತಿರುವುದು ಇದು ಮೊದಲೇನಲ್ಲ. ನಮ್ಮ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ರೈತರ ರಾಸುಗಳು ಚಿರತೆ ಪಾಲಾಗಿವೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಚಿರತೆ ಆಗಾಗ್ಗೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ತಿಂದುಹಾಕುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚಿರತೆ ದಾಳಿಯಿಂದಾಗಿ ಕೃಷಿ ಚಟುವಟಿಕೆ ಮಾಡಲು ಭಯಬೀಳುವಂತಾಗಿದೆ. ಇನ್ನಾದರೂ ಅರಣ್ಯಾಧಿಕಾರಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯ ಯೋಗೇಶ್ ಒತ್ತಾಯಿಸಿದ್ದಾರೆ.