ಹೊಸ ದಿಗಂತ ವರದಿ, ಹಾವೇರಿ:
ಕೋವಿಡ್ ಆರ್ಥಿಕ ಹಿಂಜರಿತ, ಹಿಂದಿನ ಸಾಲ ನಿಭಾಯಿಸಿ, ಸಂಪನ್ಮೂಲ ಕೃಢೀಕರಣವಾಗುವಂತಹ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಜೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹಿರೇಬೆಂಡಿಗೇರಿಯ ದೊಡ್ಡಕೆರೆಗೆ ಬಾಗೀನ ಅರ್ಪಿಸುವುದಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಜೆಟ್‌ಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳ ಬೇಡಿಕೆಗಳ ಮನ್ನಣೆ ಕೆಲಸ ಇನ್ನೆರಡು ದಿನಗಳ ಮುಗಿಯುತ್ತದೆ. ನಂತರ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು. ಬಹುತೇಕ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.
ರಾಜ್ಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳೊಂದಿಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕೆಂಬ ಚರ್ಚೆಯನ್ನು ಮಾಡುವ ಮೂಲ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಜೆಟ್ ನೀಡಲಾಗುವುದು ಎಂದು ತಿಳಿಸಿದರು.
ಸಿದ್ದರಾಮ್ಯ ಅವರ ಸರ್ಕಾರದ ಅವಧಿಯಲ್ಲಿನೇ ಅತಿ ಹೆಚ್ಚು ಸಾಲದ ಸುಳಿಗೆ ರಾಜ್ಯ ಸಿಲುಕಿತ್ತು. ಕೋವಿಡ್ ಇಲ್ಲದ ಸಂದರ್ಭದಲ್ಲಿಯೂ ಕೂಡ ಅತಿ ಹೆಚ್ಚು ಸಾಲ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎನ್ನುವ ಮೂಲಕ, ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದರು ಮುಖ್ಯಮಂತ್ರಿ ಬೊಮ್ಮಾಯಿ.
ಹಿಂದಿನ ಸಾಲವನ್ನು ನಿಭಾಯಿಸಿ, ಕೋವಿಡ್ ಸಂದರ್ಭದಲ್ಲಿನ ಆರ್ಥಿಕ ಹಿಂಜರಿತವನ್ನು ಸಹ ನಿಭಾಯಿಸಿ ಪ್ರಸಕ್ತ ರಾಜ್ಯದ ಆರ್ಥಿಕತೆ ಸ್ವಲ್ಪ ಚೇತರಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ಹಾಗೂ ರಾಜ್ಯದ ಸಂಪನ್ಮೂಲವನ್ನು ಹೆಚ್ಚಿಸುವಂತಹ ಸರ್ವ ಪ್ರಯತ್ನವನ್ನು ಮಾಡಿ ಆಯವ್ಯಯವನ್ನು ಮಂಡಿಸಲಾಗುವುದು ಎಂದು ತಿಳಿಸಿದರು.
ಹಿಜಾಬ್ ಕುರಿತಾದ ಗಲಭೆ ಹಿಂದೆ ಸಿಎಫ್‌ಐ ಸೇರಿದಂತೆ ಕೆಲ ಸಂಘಟನೆಗಳ ಕುಮ್ಮಕ್ಕಿದೆ ಎಂಬ ಮಾತುಗಳು ಕೇಳಿಬರುತ್ತಿವ ಕುರಿತು ಸಂಬಂಧಿಸಿದ ಎಜೆನ್ಸಿಗಳು(ಇಲಾಖೆಗಳು) ನೋಡಿಕೊಳ್ಳುತ್ತವೆ. ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಕುರಿತಾದ ಘಟನೆಗಳಿಂದಾದ ಅಶಾಂತಿ ಕಳೆದು ಪ್ರಸಕ್ತ ರಾಜ್ಯದೆಲ್ಲೆಡೆ ಶಾಂತಿ ನೆಲೆಸಿದೆ. ಪ್ರಮುಖವಾಗಿ ಶಾಲಾ ಕಾಲೇಜುಗಳಲ್ಲಿ ಶಾಂತಿ ನೆಲೆಸುವಂತಾಗಬೇಕು. ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಈ ಹಿಂದೆ ವಿದ್ಯಾರ್ಥಿಗಳು ಹೇಗೆ ಭೇದ ಭಾವವಿಲ್ಲದೆ ಒಮ್ಮನಸ್ಸಿನಿಂದ ಒಂದಾಗಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರೋ ಹಾಗೆ ಶಿಕ್ಷಣವನ್ನು ಪಡೆದುಕೊಳ್ಳುವಂತೆ ಮಾಡುವುದು ನನ್ನ ಮೊದಲ ಕರ್ತವ್ಯ ಆ ಕೆಲೆಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.
ಕವಿ ಚನ್ನವೀರ ಕಣವಿಯವರಿಗೆ ರಾಷ್ಟ್ರ ಕವಿ ಎಂದು ಪರಿಗಣಿಸುವ ಕುರಿತು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮಹೇಶ ಜೋಶಿಯವರ ಹೇಳಿಕೆ ಕುರಿತು ಪ್ರತಿಕ್ರೀಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಾಹಿತ್ಯ ಪರಿಷತ್‌ನ ಅಭಿಲಾಷೆಯನ್ನು ಪರಿಗಣಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಕ್ಕೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಇತರರಿದ್ದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ