ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತರಾಷ್ಟ್ರೀಯ ಮಾಧ್ಯಮ ಫೋರ್ಬ್ಸ್ ವಾರ್ಷಿಕ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಫ್ರೆಂಚ್ ಮೂಲದ ಲೂಯಿ ವೆಟ್ಟಾನ್ ಕಂಪನಿಯ ಬರ್ನಾರ್ಡ್ ಅರ್ನಾಲ್ಟ್ ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.
ಫೋರ್ಬ್ಸ್‌ನ ವಾರ್ಷಿಕ ‘ಜಾಗತಿಕ ಬಿಲಿಯನೇರ್‌ಗಳ ಪಟ್ಟಿ 2023’ ಪ್ರಕಾರ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯವು ಕಳೆದ ವರ್ಷದಲ್ಲಿ 39 ಬಿಲಿಯನ್ ಡಾಲರ್ ಕುಸಿದು 180 ಬಿಲಿಯನ್ ಡಾಲರ್ ಗೆ ತಲುಪಿದೆ. ಆದರೆ ಅರ್ನಾಲ್ಟ್ ಅವರ ಆಸ್ತಿ ಮೌಲ್ಯವು ಕಳೆದ ಒಂದು ವರ್ಷದಲ್ಲಿ 50 ಬಿಲಿಯನ್ ಡಾಲರ್ ಏರಿಕೆಯಾಗಿ 211 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಎಲೋನ್ ಮಸ್ಕ್ ಮತ್ತು ಅರ್ನಾಲ್ಟ್ ಸ್ಥಾನಗಳಿ ಫೋರ್ಬ್ಸ್‌ನ ‘ರಿಯಲ್-ಟೈಮ್ ಬಿಲಿಯನೇರ್ಸ್’ ಪಟ್ಟಿಯಲ್ಲಿ ಆಗಾಗ ಬದಲಾಗುತ್ತಿರುತ್ತವೆ.
ಫೋರ್ಬ್ಸ್ ವರದಿಯ ಪ್ರಕಾರ ಕಳೆದೊಂದು ವರ್ಷದಲ್ಲಿ ಅರ್ನಾಲ್ಟ್ ಅತಿ ಹೆಚ್ಚು ಲಾಭ ಗಳಿಸಿದ್ದಾರೆ. ದಾಖಲೆಯ ಮಾರಾಟವು ಅವರು ಲಾಭಕ್ಕೆ ಕಾರಣವಾಗಿದ್ದು ಲೂಯಿ ವಟ್ಟಾನ್ ಷೇರುಗಳು 18 ಶೇಕಡಾ ಏರಿಕೆಯಾಗಿವೆ. ಇದರಿಂದ ಅವರ ಒಟ್ಟಾರೆ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 50 ಬಿಲಿಯನ್ ಡಾಲರುಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿರೋ ಅರ್ನಾಲ್ಟ್ ಈ ಸ್ಥಾನಕ್ಕೇರಿದ ಮೊದಲ ಫ್ರೆಂಚ್ ವ್ಯಕ್ತಿ ಎನಿಸಿದ್ದಾರೆ.
ಇನ್ನು ಭಾರತದ ಉದ್ಯಮಿ ಹಾಗು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಮರುಗಳಿಸಿದ್ದಾರೆ. ಈ ಹಿಂದೆ ಅದಾನಿ ಸಮೂಗಹದ ಗೌತಮ್ ಅದಾನಿ ಆ ಸ್ಥಾನದಲ್ಲಿದ್ದರು. ಆದರೆ ಹಿಂಡೆನ್ ಬರ್ಗ್ ವರದಿಯ ನಂತರ ಲಕ್ಷಾಂತರ ಕೋಟಿ ರೂ. ನಷ್ಟದಿಂದ ಅದಾನಿ ಸಂಪತ್ತು ಕುಸಿದ ಪರಿಣಾಮ ಮುಕೇಶ್ ಅಂಬಾನಿ ಆ ಸ್ಥಾನಕ್ಕೆ ಏರಿದ್ದಾರೆ. ಒಟ್ಟಾರೆಯಾಗಿ 83.4 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದು ಏಷ್ಯಾ ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.