ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಪ್ರಿಯಕರನೇ ಕತ್ತು ಹಿಸುಕಿ ಕೊಂದಿರುವ ಅಮಾನುಷ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯಾ ಮೃತ ಯುವತಿ. ಕೊಲೆ ಮಾಡಿದವನನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಎಂದು ಗುರುತಿಸಲಾಗಿದೆ .
ಕಳೆದ ಎರಡೂವರೆ ವರ್ಷದಿಂದ ಸೌಮ್ಯಾ ಮತ್ತು ಸೃಜನ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ತನ್ನನ್ನು ಮದುವೆಯಾಗುವಂತೆ ಸೌಮ್ಯಾ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಸೃಜನ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಸೃಜನ್ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸೃಜನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೀರ್ಥಹಳ್ಳಿಯಲ್ಲಿ ಫೈನಾನ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ಕೊಪ್ಪಕ್ಕೆ ಹಣ ವಸೂಲಿಗೆ ಹೋಗುತ್ತಿದ್ದ ವೇಳೆ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸೌಮ್ಯಾಳ ಪರಿಚಯವಾಗಿತ್ತು. ಇಬ್ಬರ ನಡುವಿನ ಪರಿಚಯ ನಂತರ ಪ್ರೀತಿಯಾಗಿ ಬದಲಾಗಿತ್ತು. ಬೇರೆ ಬೇರೆ ಸಮುದಾಯ ಆಗಿದ್ದಕ್ಕೆ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸೃಜನ್ ಕ್ರಮೇಣ ಸೌಮ್ಯಾಳಿಂದ ದೂರವಾಗತೊಡಗಿದ್ದ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಲು ಮುಂದಾಗಿದ್ದ ಸೃಜನ್ ಬಳಿ ಸೌಮ್ಯಾ ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಹೇಳಿ ಜುಲೈ 2ರಂದು ಸೌಮ್ಯಾ ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು. ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಪ್ರಿಯಕರ ಹೇಳಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವತಿ ಮೇಲೆ ಯುವಕ ಬಲವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನಂತರ ಸೌಮ್ಯಾಳ ಶವವನ್ನು ಮುಂಬಾಳು ಬಳಿ ಹೂತಿಟ್ಟು ಸೃಜನ್ ಮನೆಗೆ ತೆರಳಿದ್ದ. ಈ ನಡುವೆ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸೌಮ್ಯಾ ಪೋಷಕರು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು. ಅನುಮಾನ ಬಂದು ಸೃಜನ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರ ಎದುರು ಸೌಮ್ಯಾಳನ್ನು ಹೂತಿಟ್ಟ ಸ್ಥಳದ ರಹಸ್ಯವನ್ನು ಸೃಜನ್ ಬಿಚ್ಚಿಟ್ಟಿದ್ದ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.