January21, 2026
Wednesday, January 21, 2026
spot_img

ಹಿಂದು ಸಂಪ್ರದಾಯದಂತೆ ದಶಾಶ್ವಮೇಧ ಘಾಟ್‌ನಲ್ಲಿ ಮದುವೆಯಾದ ವಿದೇಶಿ ಜೋಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ದಂಪತಿ ದಶಾಶ್ವಮೇಧ ಘಾಟ್‌ನಲ್ಲಿರುವ ನಲ್ವಾ ವೀರ್ ಬಾಬಾ ದೇವಸ್ಥಾನದಲ್ಲಿ ವೈದಿಕ ಆಚರಣೆಗಳು ಮತ್ತು ಹಿಂದು ಪದ್ಧತಿಗಳನ್ನು ಅನುಸರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಷ್ಯಾದ ನಿವಾಸಿಗಳಾದ ಮರಿನ್ (36) ಮತ್ತು ಕಾನ್ಸ್ಟಾಂಟಿನ್ (48) ಮಂತ್ರಗಳ ಪಠಣ, ವೈದಿಕ ಆಚರಣೆಗಳು ಮತ್ತು ದೇವರನ್ನು ಸಾಕ್ಷಿಯಾಗಿಟ್ಟುಕೊಂಡು ಸಪ್ತಪದಿ ತುಳಿದರು. ಜೈಮಾಲಾ (ಮಾಲೆ), ಸಿಂಧೂರ್ದಾನ (ಸಿಂಧೂರ), ಫೆರಾಸ್ (ವೃತ್ತಗಳು) ಮತ್ತು ಆಶೀರ್ವಾದ ಸೇರಿದಂತೆ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುವುದರೊಂದಿಗೆ ವಿವಾಹ ಮಹೋತ್ಸವವನ್ನ ನೆರವೇರಿಸಲಾಯಿತು. ಮಹಿಳೆಯರು ದೇವಾಲಯದ ಆವರಣದಲ್ಲಿ ಹಾಡುಗಳ ಮೂಲಕ ಮದುವೆಗೆ ಮೆರಗು ನೀಡಿದರು.

ರಷ್ಯಾದ ವಧು – ವರರು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿ ಗಮನ ಸೆಳೆದರು. ವಧು ಮರೀನ್ ತಿಳಿ ಹಳದಿ ಸೀರೆಯನ್ನು ಧರಿಸಿದ್ದರೆ, ವರ ಕಾನ್ಸ್ಟಾಂಟಿನ್ ಧೋತಿ ಮತ್ತು ಕುರ್ತಾ ಧರಿಸಿ ಮಿಂಚಿದರು.

ವಧು ಮರೀನ್ ಮಾತನಾಡಿ, ಭಾರತೀಯ ನಾಗರಿಕತೆ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ತಾನು ಆಳವಾಗಿ ಪ್ರೀತಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು. ಇಲ್ಲಿನ ಸಂಪ್ರದಾಯಗಳು ತನಗೆ ಇಷ್ಟ ಎಂದ ಅವರು, ತಾನು ಹಿಂದು ಪದ್ಧತಿಗಳ ಪ್ರಕಾರ ಕಾಶಿಯಲ್ಲಿ ಮದುವೆಯಾಗಲು ನಿರ್ಧರಿಸಿದೆ ಎಂದರು.

ಐದು ವರ್ಷಗಳ ಹಿಂದೆ ಶಿವ ಮತ್ತು ಪಾರ್ವತಿ ದೇವಿಯರಿಂದ ಪ್ರೇರಿತರಾಗಿ ಹಿಂದು ಪದ್ಧತಿಗಳ ಪ್ರಕಾರ ಕಾಶಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಮತ್ತು ಇಂದು ಅವರು ಈ ಪ್ರತಿಜ್ಞೆಯನ್ನು ಪೂರೈಸುತ್ತಿದ್ದಾರೆ ಎಂದು ಮರೀನ್​ ನೆನಪಿಸಿಕೊಂಡರು.

ವೇದ ಪಠಣಗಳ ನಡುವೆ ವಿವಾಹವನ್ನು ನೆರವೇರಿಸಲಾಯಿತು ಎಂದು ಪಂಡಿತ್ ಶಿವಕಾಂತ್ ಪಾಂಡೆ ಹೇಳಿದ್ದಾರೆ. ವಿವಾಹದ ನಂತರ ದೇವಾಲಯದ ಆವರಣವು ಹರ ಹರ ಮಹಾದೇವ ಮಂತ್ರಗಳೊಂದಿಗೆ ಪ್ರತಿಧ್ವನಿಸಿತು. ಈ ಐತಿಹಾಸಿಕ ಮತ್ತು ಭಾವನಾತ್ಮಕ ಕ್ಷಣವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಸ್ಥಳೀಯರು, ಭಕ್ತರು ಮತ್ತು ಪ್ರವಾಸಿಗರು ಹಾಜರಿದ್ದರು. ಅನೇಕರು ಈ ವಿಶಿಷ್ಟ ವಿವಾಹವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ವಿದೇಶಿ ದಂಪತಿಗಳನ್ನು ಆಶೀರ್ವದಿಸಿದರು.

Must Read