ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದನೆ ನಿಲ್ಲದ ಹೊರತು ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಇಲ್ಲ ಮತ್ತು ಸಿಂಧೂ ನದಿ ನೀರಿನ ಒಪ್ಪಂದವನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ದೆಹಲಿಯಲ್ಲಿ ಹೊಂಡುರಾಸ್ ರಾಯಭಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಭಯೋತ್ಪಾದನೆ ಬಗೆಹರಿಯುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಸಾಮಾನ್ಯ ಮಾತುಕತೆ ಸಾಧ್ಯವಿಲ್ಲ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಪರಿಹಾರ ಕಂಡುಕೊಳ್ಳುವವರೆಗೆ ಸಿಂಧೂ ನದಿ ಜಲ ಒಪ್ಪಂದದ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲದ ಹೊರತು, ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ. ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ವಿಶ್ವಾಸಾರ್ಹವಾಗಿ ಪರಿಹಾರ ಕಂಡುಕೊಳ್ಳುವವರೆಗೂ ಈ ಸ್ಥಗಿತ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದೊಂದಿಗಿನ ಯಾವುದೇ ಸಂವಾದ ಕೇವಲ ಭಯೋತ್ಪಾದನೆ ಕುರಿತಾಗಿರುತ್ತದೆ. ಇದು ಪ್ರಧಾನಮಂತ್ರಿ ಅವರ ನಿಲುವು ಮತ್ತು ರಾಷ್ಟ್ರೀಯ ಮಟ್ಟದ ಒಗ್ಗಟ್ಟಿನ ಮಾತಾಗಿದೆ ಎಂಬುದನ್ನು ಪುನರುಚ್ಛರಿಸಿದರು. ಜಮ್ಮು-ಕಾಶ್ಮೀರ ಕುರಿತು ಚರ್ಚೆಗೆ ಸಂಬಂಧಿಸಿದಂತೆ ಜೈಶಂಕರ್ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಖಾಲಿ ಮಾಡುವುದು ಮಾತ್ರ ಚರ್ಚೆಯ ವಿಷಯ. ಇತರ ಯಾವ ವಿಚಾರಗಳೂ ಚರ್ಚೆಗೆ ಬರುವುದೇ ಇಲ್ಲ ಎಂದರು.
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಕುರಿತಾಗಿ ಮಾತನಾಡಿದ ಜೈಶಂಕರ್, ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿವೆ. ಇವು ಸಂಕೀರ್ಣವಾಗಿವೆ ಮತ್ತು ಅಂತಿಮ ನಿರ್ಣಯಕ್ಕೆ ಬರುವವರೆಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದರು. ಯಾವುದೇ ವ್ಯಾಪಾರ ಒಪ್ಪಂದವು ಪರಸ್ಪರ ಲಾಭದಾಯಕವಾಗಿರಬೇಕು. ಎರಡೂ ದೇಶಗಳ ಹಿತಾಸಕ್ತಿಗೆ ಅನುಕೂಲವಾಗಬೇಕು ಎಂಬುದನ್ನು ಒತ್ತಿಹೇಳಿದರು.