ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿನ ಪರಿಚಯವಾದ ಗೆಳೆಯನಿಗಾಗಿ ಪಾಕಿಸ್ತಾನ ತೆರಳಿದ ಭಾರತದ ಅಂಜು ಇನ್ನೂ ಬರದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪಾಕ್ ತೆರಳಿದ ವೇಳೆ ಒಂದು ವಾರದಲ್ಲಿ ವಾಪಸ್ ಬರುವೆ ಎಂದಿದ್ದ ಅಂಜು ಇದೀಗ ನಸ್ರುಲ್ಲಾ ಜೊತೆ ಮದುವೆಯಾಗಿದ್ದು, ಇದರ ಬೆನ್ನಲ್ಲೇ ಹಲವು ಅನುಮಾನಗಳು ಕಾಡತೊಡಗಿದೆ.
ಈ ಹಿನ್ನೆಲೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅಂಜು ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.
ರಾಜಸ್ಥಾನ ಮೂಲದ 34ವರ್ಷದ ವಿವಾಹಿತ ಮಹಿಳೆ ಅಂಜುಇಬ್ಬರು ಮಕ್ಕಳನ್ನು ಬಿಟ್ಟು ನೇರವಾಗಿ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಒಂದೇ ವಾರದಲ್ಲಿ ಮರಳಿ ಬರುತ್ತೇನೆ ಎಂದು ಮಕ್ಕಳಲ್ಲಿ ಹೇಳಿದ್ದ ಅಂಜು, ಸೋಶಿಯಲ್ ಮಿಡಿಯಾದಲ್ಲಿ ಪರಿಚಯವಾಗಿದ್ದ ನಾಸ್ರುಲ್ಲಾ ಭೇಟಿಗೆ ಪಾಕಿಸ್ತಾನ ಪ್ರವಾಸ ಮಾಡಿದ್ದಳು.
ಇತ್ತ ಅಮ್ಮನ ಬರುವಿಕೆಗಾಗಿ ಕಾದ ಮಕ್ಕಳು ನಿರಾಸೆಗೊಂಡಿದ್ದಾರೆ. ಅಂಜು ನಾಸ್ರುಲ್ಲಾ ಜೊತೆ ಮದುವೆಯಾಗಿದ್ದಾಳೆ. ಬಳಿಕ ಇಸ್ಲಾಂಗೆ ಮತಾಂತರವಾಗಿದ್ದಾಳೆ. ಇಷ್ಟೇ ಅಲ್ಲ ಇದೀಗ ಭಾರತದ ಅಂಜು, ಪಾಕಿಸ್ತಾನದಲ್ಲಿ ಫಾತಿಮಾ ಆಗಿ ಮತಾಂತರಗೊಂಡಿದ್ದಾಳೆ.
ಇತ್ತ ಅಂಜು ನಸ್ರುಲ್ಲಾ ಮದುವೆಯಾದ ಬೆನ್ನಲ್ಲೇ ಪಾಕಿಸ್ತಾನದ ಉದ್ಯಮಿ, ನವ ದಂಪತಿಗಳನ್ನು ಭೇಟಿಯಾಗಿ ಹಣ , ಚೆಕ್, ಮನೆ ಸೇರಿದಂತೆ ಕೆಲ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ಈ ಎಲ್ಲಾ ಘಟನೆಗಳ ಹಿಂದೆ ಷಡ್ಯಂತ್ರ ಕಾಣಿಸುತ್ತಿದೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಅಂಜು ವಿಷಯದಲ್ಲಿ ವಿದೇಶಿಗರ ಕೈವಾಡದ ಬಗ್ಗೆ ತನಿಖೆ ಮಾಡಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,‘ಅಂಜು ಅವರು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಉಡುಗೊರೆಗಳನ್ನು ಸ್ವೀಕರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ವಿಷಯ ಗ್ವಾಲಿಯರ್ ಜಿಲ್ಲೆಗೆ ಸಂಬಂಧಿಸಿದ್ದರಿಂದ, ತನಿಖೆ ನಡೆಸುವಾಗ ಎಲ್ಲ ಆಯಾಮಗಳನ್ನು ಸೂಕ್ಷ್ಮವಾಗಿ ಪರೀಕ್ಷೆ ನಡೆಸಲು ವಿಶೇಷ ಪೊಲೀಸ್ ಪಡೆಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ವಿದೇಶಿಗರ ಕೈವಾಡ ಇದೆಯೋ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ’ ಎಂದರು.