-ಮೇಘನಾ ಶೆಟ್ಟಿ, ಶಿವಮೊಗ್ಗ
ಎಲ್ಲಾದ್ರೂ ನೋಡಿ, ವಿದೇಶಿಗರು ನಮ್ಮ ದೇಶಕ್ಕೆ ಬಂದಾಗಲೆಲ್ಲ ಊಟದ ಬಗ್ಗೆ ತುಂಬಾನೇ ಆಸಕ್ತಿ ತೋರಿಸ್ತಾರೆ, ಎಷ್ಟೋ ಜನರು ಇಲ್ಲಿನ ಅಡುಗೆಗೆ ಮನಸೋತು ಮತ್ತೆ ಮತ್ತೆ ಬರ‍್ತಾರೆ, ನಮ್ಮ ಊಟ ತಿಂಡಿ, ಮಸಾಲೆಗಳ ಸುವಾಸನೆ, ಪ್ರೀತಿಯಿಂದ ಉಣಬಡಿಸುವ ರೀತಿಯ ಶಕ್ತಿಯೇ ಅಂಥದ್ದು.
ಊಟ ಮಾಡಿ ಸುಮ್ಮನಾಗೋದಿಲ್ಲ, ಇದಕ್ಕೆ ಏನೆಲ್ಲಾ ಹಾಕಿದ್ದಾರೆ? ಹೇಗೆ ಅಡುಗೆ ಮಾಡ್ತಾರೆ? ನಾವು ನೋಡ್ಬೋದಾ? ನಾವು ಕಲಿಬೋದಾ ಅಂತ ಪೊಲೈಟ್ ಆಗಿ ಕೇಳಿಕೊಳ್ತಾರೆ, ಫಾರೀನರ್ ಬಂದು ನಿಮ್ಮ ಟೀ ರೆಸಿಪಿ ಕೇಳಿದ್ರೆ ಹೇಳದೇ ಇರೋಕೆ ಆಗತ್ತಾ? ಪ್ರೀತಿಯಿಂದ ನಾವು ಕೂಡ ಕಲಿಸಿಕೊಡ್ತೀವಿ.
ಉದಯಪುರದ ಶಶಿಕಲಾ ಸನಾಧ್ಯ ಕೂಡ ಫಾರೀನರ‍್ಸ್‌ಗೆ ಅಡುಗೆ ಕಲಿಸಿಕೊಡೋದ್ರಲ್ಲಿ ಫೇಮಸ್. ಶಶಿಕಲಾಗೆ ಜನರನ್ನು ಪ್ರೀತಿಯಿಂದ ಸ್ವಾಗತಿಸೋದು, ನಮ್ಮ ಅಡುಗೆಯ ರುಚಿ ತೋರಿಸೋದು, ರೆಸಿಪಿ ಶೇರ್ ಮಾಡೋದು ಇಷ್ಟದ ಕೆಲಸ. ಟೂರಿಸ್ಟ್‌ಗಳಿಗೆ ಕುಕ್ಕಿಂಗ್ ಕ್ಲಾಸ್ ಮಾಡುತ್ತಾ ಶಶಿಕಲಾ ಸಮಯ ಕಳೀತಾರೆ.
ಕೆಟ್ಟ ಸುದ್ದಿಯೊಂದು ಕಾದಿತ್ತು:
ರಾಜಸ್ಥಾನದ ಪುಟ್ಟ ಹಳ್ಳಿಯಲ್ಲಿದ್ದ ಶಶಿಕಲಾ ಹೊಟೇಲ್ ಮ್ಯಾನೇಜರ್‌ನ್ನು ಮದುವೆಯಾಗಿದ್ದರು. ಅದೊಂದು ದಿನ ಪತಿ ಫೋನ್ ಮಾಡಿ ಪರೋಟಾ ತಯಾರು ಮಾಡು ಬೆಳಗ್ಗೆ ಬೇಗ ಬರ‍್ತೀನಿ ಎಂದು ಫೋನ್ ಮಾಡಿದ್ದರು. ಮರುದಿನ ಗಂಡನಿಗಾಗಿ ಕಾಯುತ್ತಿದ್ದ ಶಶಿಕಲಾಗೆ ಕೆಟ್ಟ ಸುದ್ದಿಯೊಂದು ಕಾದಿತ್ತು. ಆಕೆಯ ಜಗತ್ತೇ ಅಲ್ಲಾಡಿ ಹೋಗಿತ್ತು, ಶಶಿಕಲಾ ಪತಿಯನ್ನು ದುಡ್ಡಿಗಾಗಿ ಕೊಲೆ ಮಾಡಲಾಗಿತ್ತು. ಗಂಡನನ್ನು ಕಳೆದುಕೊಂಡ ನಂತರ ಶಶಿಕಲಾಗೆ ಬದುಕೇ ಬೇಡವಾಗಿತ್ತು. ಧನಸಹಾಯಕ್ಕೆ ಯಾರೂ ಬಾರದೆ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸಿ ಓದಿಸಿದರು.
ಇಂಗ್ಲಿಷ್ ಬರೋದಿಲ್ಲ:
ಇದಾದ ಕೆಲ ವರ್ಷಗಳ ನಂತರ ಬೇಸರ ಕಳೆಯಲು ಶಶಿಕಲಾ ಕುಕ್ಕಿಂಗ್ ಕ್ಲಾಸ್ ಆರಂಭಿಸಿದರು. ಇದೀಗ ಪೋಲೆಂಡ್, ಇಟಲಿಯಿಂದ ಶಶಿಕಲಾ ಕೈಯಲ್ಲಿ ಅಡುಗೆ ಕಲಿಯಲು ಜನರು ಬರುತ್ತಾರೆ. ಇಂಗ್ಲಿಷ್ ಬರೋದಿಲ್ಲ, ಆದರೂ ಸನ್ನೆಗಳ ಮೂಲಕ ಸಣ್ಣ ಪುಟ್ಟ ಪದಗಳ ಮೂಲಕ ಶಶಿಕಲಾ ಫಾರೀನರ‍್ಸ್ ಜತೆ ಮಾತನಾಡುತ್ತಾರೆ. ಮೊದಲು ಬಂದವರಿಗೆ ಮಸಾಲಾ ಟೀ, ನಂತರ ಚಟ್ನಿಗಳು, ನಂತರ ಪಕೋಡಾ ಹೀಗೆ ಎಲ್ಲ ರೀತಿ ಅಡುಗೆ ಕಲಿಸುತ್ತಾರೆ.
ಸಾಕಷ್ಟು ವ್ಯತ್ಯಾಸ ಇದೆ:
ಲೋಕಲ್ ಟೂರ್ ಗೈಡ್‌ಗಳು ಹಾಗೂ ಮಕ್ಕಳು ತಾಯಿ ಹೆಸರಿನಲ್ಲಿ ಮಾಡಿದ ಸಾಮಾಜಿಕ ಜಾಲತಾಣಗಳ ಅಕೌಂಟ್‌ನಿಂದ ಟೂರಿಸ್ಟ್ಸ್ ಇವರನ್ನು ಹುಡುಕುತ್ತಾರೆ. ಬೇರೆ ದೇಶಗಳಲ್ಲಿ ಭಾರತದ ಆಹಾರ ಎಂದು ಹೇಳಿ ನೀಡಲಾಗುವ ಆಹಾರಕ್ಕೂ ಇಲ್ಲಿ ತಿನ್ನುವ ಆಹಾರಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಈ ಊಟ ತುಂಬಾ ರುಚಿಕರವಾಗಿದೆ ಎಂದು ಟೂರಿಸ್ಟ್‌ಗಳು ಹೇಳುತ್ತಾರೆ.
ನಮ್ಮ ದೇಶದ ಬಗ್ಗೆ ಒಳ್ಳೆ ಮಾತಾಡ್ಬೇಕು :
ದುಡ್ಡು ಇಲ್ಲದೇ ಸೇವೆ ಮಾಡುವ ಸ್ಥಿತಿಯಲ್ಲಿ ನಾನಿಲ್ಲ, ಆದರೆ ಬಂದ ಟೂರಿಸ್ಟ್‌ಗಳಿಗೆ ಮೋಸ ಮಾಡೋದಿಲ್ಲ, ಮಕ್ಕಳನ್ನು ಓದಿಸಲು ನನಗೂ ಹಣ ಬೇಕಿದೆ. ಆದರೆ ಬಂದವರಿಗೆ ಭಾರತೀಯ ಸಂಪ್ರದಾಯಗಳ ಬಗ್ಗೆ ರುಚಿಕರ ಅಡುಗೆ ಬಗ್ಗೆ ನನಗೆ ಗೊತ್ತಿರುವಷ್ಟು ತಿಳಿಸುತ್ತೇನೆ. ಅವರುಗಳ ದೇಶಕ್ಕೆ ತೆರಳಿದಾಗ ನಮ್ಮ ದೇಶದ ಬಗ್ಗೆ ಒಳ್ಳೆಯ ಮಾತುಗಳನ್ನಾಡಬೇಕು ಅನ್ನೋದು ನನ್ನ ಉದ್ದೇಶ ಎಂದು ಶಶಿಕಲಾ ಹೇಳುತ್ತಾರೆ.