ಹೊಸದಿಗಂತ ವರದಿ ಹಾಸನ:
ಕಳೆದ ಎರಡು ದಶಕಗಳಿಂದ ಜಿಲ್ಲೆಯ ಸಕಲೇಶಪುರ, ಆಲೂರು ಭಾಗದಲ್ಲಿ ಕಾಡಾನೆಗಳ ದಾಂಧಲೆ ಹೆಚ್ಚಾಗಿತ್ತು. ಆದರೆ, ಕಳೆದ ಒಂದು ತಿಂಗಳಿನಿಂದ ಬೇಲೂರು ತಾಲೂಕಿಗೆ ಎಂಟ್ರಿ ಕೊಟ್ಟಿದ್ದು ಮಲೆನಾಡಿಗರದ ಬದುಕನ್ನು ಮೂರಬಟ್ಟೆಯಾಗಿಸಿವೆ.
ಕಳೆದ ನಾಲ್ಕು ವರ್ಷಗಳಿಂದ ಕಾಡಾನೆಗಳ ಹಾವಳಿ ದಿನೇ ದಿನೆ ಹೆಚ್ಚುತ್ತಲೇ ಇದೆ. ಬಿಕ್ಕೋಡು, ಚಿಕ್ಕಬಿಕ್ಕೋಡು, ತಾವರೆಕೆರೆ, ನಿಡುಮನಹಳ್ಳಿ, ಬೆಳ್ಳಾವರ, ಇಂಟಿತೊಳಲು, ಚೌಡನಹಳ್ಳಿ ಬಕ್ರವಳ್ಳಿ ಇತರೆ ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿವೆ. ರೈತರು ಹಾಗೂ ಕಾಫಿ ಬೆಳೆಗಾರರ ನಿದ್ದೆಗೆಡಿಸಿವೆ. ಸುಮಾರು ಐವತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ಭಾಗದಲ್ಲಿ ನೆಲೆಯೂರಿದ್ದು ಅಡಕೆ, ಕಾಫಿ, ಬಾಳೆ, ತೆಂಗು, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ.
ಮಲೆನಾಡು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಹಿಂದೆಂದೂ ಕಾಣದ ಸಂಕಷ್ಟ ಎದುರಾಗಿದೆ. ಕಾಡಾನೆಗಳ ಕಾಟಕ್ಕೆ ಬೇಸತ್ತ ರೈತರು ಹಾಗೂ ಕಾಫಿ ಬೆಳೆಗಾರರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದೆ ಪಾಳು ಬಿಟ್ಟಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು ಭಾಗದ ರೈತರು ಜೀವನೋಪಾಯಕ್ಕಾಗಿ ಭತ್ತ, ರಾಗಿ, ಮೆಕ್ಕೆಜೋಳ ಬೆಳೆಯುತ್ತಿದ್ದರು.
ಆದರೆ, ಆನೆಗಳ ಹಾವಳಿಯಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದು, ಜಮೀನನ್ನು ಉಳುಮೆ ಮಾಡದೆ ಪಾಳು ಬಿಟ್ಟು ಕುಟುಂಬ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇನ್ನೂ ಕೆಲವು ರೈತರು ತಮ್ಮ ಜಮೀನಿನಲ್ಲಿ ಭತ್ತ, ಮೆಕ್ಕೆಜೋಳ, ಶುಂಠಿ ಬೆಳೆದಿದ್ದು ಹಗಲು ರಾತ್ರಿ ಎನ್ನದೆ ತಮ್ಮ ಜೀವನನ್ನು ಪಣಕ್ಕಿಟ್ಟು ಬೆಳೆ ಕಾಯುತ್ತಿದ್ದಾರೆ. ತಮ್ಮ ಜಮೀನು ಬಳಿ ಬೆಂಕಿ ಹಾಕಿಕೊಂಡು ಮೈಕ್ ಮೂಲಕ ಅನೌನ್ಸ್ ಮಾಡಿ ಕಾಡಾನೆಗಳು ಬರುತ್ತಿದ್ದಂತೆ ಪಟಾಕಿ ಸಿಡಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಕಾಡಾನೆ ದಾಳಿಯಿಂದ ನಾಶವಾದ ಬೆಳೆಗೆ ಅರಣ್ಯ ಇಲಾಖೆ ಸರಿಯಾದ ಪರಿಹಾರ ಕೂಡ ನೀಡುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಭತ್ತ, ಮೆಕ್ಕೆಜೋಳ, ಶುಂಠಿ ಬೆಳೆಯುವುದನ್ನು ನಿಲ್ಲಿಸುವಂತೆ ಹೇಳುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಷ್ಟಪಟ್ಟು ಬೆಳೆದ ಬೆಳೆಗಳು ಕಣ್ಣೆದುರೇ ಕಾಡಾನೆಗಳ ಪಾಲಾಗುತ್ತಿದ್ದು, ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಕಾಫಿ ತೋಟದಿಂದ ಹೊರಡುವ ವೇಳೆಗೆ ಸ್ಥಳಕ್ಕೆ ಬರುವ ಇಟಿಎಫ್ ಸಿಬ್ಬಂದಿ ಗಜಪಡೆ ಬಗ್ಗೆ ಮಾಹಿತಿ ನೀಡಿ ತೆರಳುತ್ತಿದ್ದಾರೆ ಹೊರತು. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಈ ಭಾಗದ ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಇಷ್ಟೆಲ್ಲಾ ಸಮಸ್ಯೆ ಬಗ್ಗೆ ಅರಿವಿದ್ದರು ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಗಾಡ ನಿದ್ರೆಯಲ್ಲಿ ಮಲಗಿದ್ದಾರೆ. ಯಾರಾದರೂ ಮೃತಪಟ್ಟ ವೇಳೆ ಸ್ಥಳಕ್ಕೆ ಬರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಹಾರದ ಚೆಕ್ ವಿತರಿಸಿ ಭರವಸೆಯ ಮಾತುಗಳನ್ನು ಆಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಸುದೀರ್ಘ ಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಗಂಬೀರ ಆರೋಪವಾಗಿದೆ.
ಭಯದಲ್ಲಿ ಶಾಲೆಗೆ ತೆರಳಬೇಕು : ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಪ್ರತಿನಿತ್ಯ ವಿದ್ಯಾರ್ಥಿಗಳು ಜೀವ ಭಯದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಬೇಕಾಗಿದೆ. ದಸರಾ ರಜೆ ಇರುವುದರಿಂದ ೧೫ ದಿನಗಳು ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಸ್ವಲ್ಪ ನಿಟ್ಟಿಸಿರುಬಿಟ್ಟಿದ್ದ ವಿದ್ಯಾರ್ಥಿಗಳು ಶಾಲೆ ಆರಂಭವಾಗುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯಪಡುತ್ತಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮೃತಪಟ್ಟಾಗ ಪರಿಹಾರದ ಚೆಕ್ ವಿತರಿಸಿ ಕಣ್ಣೂರೆಸುವ ತಂತ್ರ ಮಾಡುತ್ತಿದ್ದಾರೆ ಹೊರತು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಬೆಳಗ್ಗೆ-ಸಂಜೆ ಎರಡು ವೇಳೆ ಬರುವ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡ ನೀಡುತ್ತಿದ್ದಾರೆ ಹೊರೆತು ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವಲ್ಲಿ ವಿಫರಾಗಿದ್ದಾರೆ ಎಂಬುವುದು ಸ್ಥಳೀಯರ ಆಕ್ರೋಶ.