ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ. ಅವರಿಗೆ ಟಿಕೆಟ್ ತಪ್ಪಿಸಿದ್ದು ನಾನೇ ಅಂತ ಗೊತ್ತಿದ್ದರೂ ಸುಮ್ಮನಿದ್ದರು. ಶ್ರೀನಿವಾಸ್ ಕೂಡ ಒಲ್ಲದ ಮನಸ್ಸಿನಿಂದಲೇ ಬಿಜೆಪಿಯಲ್ಲಿದ್ದರು. ಕೃಷ್ಣಪ್ಪ, ಶ್ರೀನಿವಾಸ್ ಇಬ್ಬರೂ ಕೂಡ ಸಾಮಾಜಿಕ ನ್ಯಾಯದ ಪರ ಇದ್ದವರು. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎ.ಕೃಷ್ಣಪ್ಪ ಪುತ್ರಿಗೆ (ಪೂರ್ಣಿಮಾ) ಬಹಳ ದಿನದಿಂದ ಗಾಳ ಹಾಕಿಕೊಂಡೇ ಬಂದಿದ್ದೆ. ಆ ಮೀನು ಕಚ್ಚಲಿಲ್ಲ, ಶ್ರೀನಿವಾಸ್ಗೂ ಗಾಳ ಹಾಕುತ್ತಿದ್ದೆ. ಅದೂ ಕಚ್ಚಿರಲಿಲ್ಲ. ಏನೇನೋ ಲೆಕ್ಕಾಚಾರ ಹಾಕುತ್ತಿದ್ದ ಮೀನು ಈಗ ಸೇರಿಕೊಂಡಿದೆ. ಕೊನೆಗೂ ನಮ್ಮ ಪಕ್ಷಕ್ಕೆ ಎಲ್ಲಾ ಸೇರ್ಪಡೆ ಆಗಿದ್ದಾರೆ. ಯಾವ ಸಮುದಾಯದ 4-5 ಸಾವಿರ ಜನ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದ್ದಾರೆ.