ಹೊಸದಿಗಂತ ಬೀದರ್:
ನಗರದ ಸಂಗಮೇಶ್ವರ ಕಾಲೋನಿಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿವೃತ್ತ ಯೋಧ ವೀರಶೆಟ್ಟಿ ಹೆಡಗಾಪುರೆ ಅವರ ಮನೆಗೆ ಕನ್ನ ಹಾಕಿರುವ ಕಳ್ಳರು, 22 ತೊಲೆ ಚಿನ್ನಾಭರಣ ದೋಚಿದ್ದಾರೆ.
ಇದೇ 23ರಂದು ವೀರಶೆಟ್ಟಿ ಅವರ ಮಗಳ ಮದುವೆಯಿದೆ. ಇದಕ್ಕಾಗಿ ವಿವಿಧ ಆಭರಣ ತಂದಿದ್ದರು. ಮದುವೆ ಆಮಂತ್ರಣ ಪತ್ರಿಕೆ ನೀಡಲು ವೀರಶೆಟ್ಟಿ ಪರಿವಾರ ಸ್ವಗ್ರಾಮಕ್ಕೆ ಹೋಗಿದ್ದು, ಬರುವಷ್ಟರೊಳಗೆ ಕಳ್ಳರು ಮನೆಗೆ ಕನ್ನ ಹಾಕಿ ನಿವೃತ್ತ ಯೋಧನ ಕುಟುಂಬಕ್ಕೆ ಆಘಾತ ನೀಡಿದ್ದಾರೆ. ಮನೆ ಮುಖ್ಯದ್ವಾರದ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಲಮಾರದಲ್ಲಿದ್ದ 22 ತೊಲಾ( 20 ಲಕ್ಷ ರೂ. ಮೌಲ್ಯ) ಚಿನ್ನಾಭರಣ, 30 ಸಾವಿರ ರೂ. ನಗದು ದೋಚಿ ಕಾಲ್ಕಿತ್ತಿದ್ದಾರೆ.
ನೌಕರಿ, ನಿವೃತ್ತಿ ಪಿಂಚಣಿ, ಸಾಲ ಮಾಡಿ ಮಗಳ ಮದುವೆಗಾಗಿ ಚಿನ್ನ ಖರೀದಿಸಲಾಗಿತ್ತು. ಎಲ್ಲವೂ ಕಳ್ಳರ ಪಾಲಾಗಿದೆ ಎಂದು ವೀರಶೆಟ್ಟಿ ಕಣ್ಣೀರು ಹಾಕಿದ್ದಾರೆ. ಗಾಂದಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದೆ.