ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಪತ್ರ: ಯೋಜನೆಗಳ ಜಾರಿಗೆ ಮನವಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸ ಸರ್ಕಾರ ಬಂದು ಬೆಳಗಾವಿಯಲ್ಲಿ ಪ್ರಥಮ ಅಧಿವೇಶನ ನಡೆಸುವ ಸಂದರ್ಭ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ಮತ್ತು ಸಮರ್ಪಕವಾಗಿ ಉತ್ತರವನ್ನು ಉತ್ತರ ಕರ್ನಾಟಕದ ಜನರು ನಿರೀಕ್ಷೆ ಮಾಡಿದ್ದರು. ಆದರೆ, ಯಾವುದೇ ಅಭಿವೃದ್ಧಿ ಪರ ನಿರ್ಣಯಗಳನ್ನು ಸರ್ಕಾರ ಘೋಷಿಸದೇ ಈಗಾಗಲೇ ಇರುವಂತಹ ಕಾರ್ಯಕ್ರಮಗಳನ್ನು ಪುನಃ ಘೋಷಿಸಿ ಜನರ ನೀರಿಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಯೋಜನೆಗಳ ಜಾರಿ ಕೋರಿ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮನವಿಯಲ್ಲಿ ….
ತುಂಗಭದ್ರ ಸಮತೋಲನ ಜಲಾಶಯಕ್ಕೆ ಕೂಡಲೇ ನೆರೆ ರಾಜ್ಯಗಳೊಂದಿಗೆ ಮಾತನಾಡಿ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು. ಕೊಪ್ಪಳ ಮತ್ತು ರಾಯಚೂರು ವಿಮಾನ‌ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಇಟ್ಟ ಹಣ ಪ್ರಯೋಜನ ಪಡೆಯಲು ಕೂಡಲೇ ಗಮನ ಹರಿಸಬೇಕು.

ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದು, ಅಗತ್ಯ ಹಣ ಬಿಡುಗಡೆ ಮಾಡಬೇಕು. ಹಾವೇರಿ ಮೆಗಾ ಡೈರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ರಾಣೆ ಬೆನ್ನೂರು ಮಿನಿ ಟೆಕ್ಸ್ ಟೈಲ್ ಪಾರ್ಕ್​​ನ್ನು ಶೀಘ್ರವೇ ಆರಂಭಿಸಬೇಕು.

ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು. ಹಾನಗಲ್ ಬ್ಯಾಡಗಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಬರುವ ಮುಂಗಾರಿನಲ್ಲಿ ಚಾಲನೆ ನೀಡಬೇಕು. ನೂತನ ಏಳು ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪದಲ್ಲಿ ಮುಚ್ಚುವ ಪ್ರಸ್ತಾಪ ಕೈ ಬಿಡಬೇಕು ಎಂದಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯ ಸಂಸ್ಕರಣ ಮತ್ತು ಶೀತಲ ಘಟಕ ಸ್ಥಾಪನೆಗೆ ನಮ್ಮ ಸರ್ಕಾರ ಇದ್ದಾಗ 100 ಕೋಟಿ ರೂ. ಮಂಜೂರು ಮಾಡಿದ್ದು, ಈ ಬಗ್ಗೆ ಯಾವುದೇ ಭರವಸೆ ನೀಡದಿರುವುದು ನಿರಾಸೆಯಾಗಿದೆ. ವಿಜಯಪುರ ವಿಮಾನ ನಿಲ್ದಾಣ ಪೂರ್ಣಗೊಳ್ಳುವ ಹಂತದಲ್ಲಿದ್ದರೂ ಕೂಡ ಈ ವರ್ಷದ ಬಜೆಟ್​ನಲ್ಲಿ ಹಣ ಮೀಸಲಿಡದಿರುವುದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5000 ಕೋಟಿ ರೂ. ನೀಡುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದೀರಿ, ಆದರೆ ಇದುವರೆಗೂ ಆ ಭಾಗದ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ ಎಂದು ಬೊಮ್ಮಾಯಿ ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!