ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪತ್ನಿಯಿಂದ ವಿಚ್ಛೇದನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ನನಗೆ ನನ್ನ ಪತ್ನಿಯಿಂದ ವಿಚ್ಛೇದನ ಬೇಕು’ ಎಂಬುದಾಗಿ ಒಮರ್ ಅಬ್ದುಲ್ಲಾ ಅವರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಒಮರ್ ಅಬ್ದುಲ್ಲಾ ಅವರು ಇದಕ್ಕೂ ಮೊದಲು ಪತ್ನಿಯಿಂದ ವಿಚ್ಛೇದನ ಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿತ್ತು. ಇದಾದ ಬಳಿಕ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾಹ್ ಅವರಿದ್ದ ಪೀಠವು, ‘ಇಬ್ಬರೂ ಕಳೆದ 15 ವರ್ಷಗಳಿಂದ ಬೇರೆ ಬೇರೆಯಾಗಿಯೇ ಬದುಕು ಸಾಗಿಸುತ್ತಿದ್ದಾರೆ. ಇವರ ಮದುವೆಗೆ ಅರ್ಥವಿಲ್ಲ’ ಎಂಬ ಅಂಶವನ್ನು ಪರಿಗಣಿಸಿತು. ನಂತರ ಪಾಯಲ್ ಅಬ್ದುಲ್ಲಾ ಅವರಿಗೆ ನೋಟಿಸ್ ನೀಡಿತು.
ಒಬರ್ ಅಬ್ದುಲ್ಲಾ ಹಾಗೂ ಪಾಯಲ್ ಅಬ್ದುಲ್ಲಾ ಅವರು ದೆಹಲಿಯಲ್ಲಿರುವ ದಿ ಒಬೆರಾಯ್‌ನಲ್ಲಿ ಕೆಲಸ ಮಾಡುವಾಗ ಪರಸ್ಪರ ಪರಿಚಯವಾಗಿದ್ದರು. ಇಬ್ಬರ ಪರಿಚಯವು ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇಬ್ಬರೂ 1994ರಲ್ಲಿ ಮದುವೆಯಾಗಿದ್ದರು. ಇವರಿಗೆ ಜಹೀರ್ ಹಾಗೂ ಜಮೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, 17 ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದ ಒಮರ್ ಅಬ್ದುಲ್ಲಾ, ನಾವಿಬ್ಬರೂ ಬೇರೆ ಬೇರೆಯಾಗಿದ್ದೇವೆ ಎಂದು 2011ರಲ್ಲಿ ಘೋಷಣೆ ಮಾಡಿದ್ದರು. ಅದಕ್ಕೂ ಮೊದಲೇ ಇಬ್ಬರೂ ಪ್ರತ್ಯೇಕವಾಗಿದ್ದರು ಎಂದು ಹೇಳಲಾಗುತ್ತಿದೆ.
ಇಬ್ಬರೂ ಬೇರೆ ಬೇರೆಯಾಗಿದ್ದರೂ ವಿಚ್ಛೇದನ ಪಡೆದಿರಲಿಲ್ಲ. ಇದೇ ಕಾರಣಕ್ಕೆ ಒಮರ್ ಅಬ್ದುಲ್ಲಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ನ್ಯಾಯಾಲಯವು ವಿಚ್ಛೇದನ ನೀಡಲು ನಿರಾಕರಿಸಿತ್ತು. ಅಷ್ಟೇ ಅಲ್ಲ, ಪಾಯಲ್ ಅವರಿಗೆ ಮಾಸಿಕವಾಗ 1.5 ಲಕ್ಷ ರೂ. ಜೀವನಾಂಶ ಹಾಗೂ ಮಗನ ಶಿಕ್ಷಣಕ್ಕೆ 60 ಸಾವಿರ ರೂ. ನೀಡಬೇಕು ಎಂಬುದಾಗಿ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಇದಾದ ಬಳಿಕವೇ ಒಮರ್ ಅಬ್ದುಲ್ಲಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.