ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ (Vinod Kambli) ತನ್ನ ಪತ್ನಿ ಆಂಡ್ರಿಯಾ ಹೆವಿಟ್‌ಗೆ (Andrea Hewitt) ಕುಡಿದು ಬಂದು ಹಲ್ಲೆ ನಡೆಸಿರುವ ಆರೋಪದಡಿ ಮುಂಬೈನ (Mumbai) ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿನೋದ್ ಕಾಂಬ್ಳಿ ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಮುಂಬೈ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಆಂಡ್ರಿಯಾ ಹೆವಿಟ್ ದೂರು ದಾಖಲಿಸಿದ್ದಾರೆ. ಪೊಲೀಸರು ಕಾಂಬ್ಳಿ ವಿರುದ್ಧ ಎಫ್‍ಐಆರ್ (FIR) ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 1 ರಿಂದ 1:30ರ ಸುಮಾರಿಗೆ ಘಟನೆ ನಡೆದಿದ್ದು, ಕಾಂಬ್ಳಿ ಪಾನಮತ್ತರಾಗಿ ತಮ್ಮ ಪ್ಲಾಟ್‍ಗೆ ಬಂದು ಮದ್ಯದ ನಶೆಯಲ್ಲಿ ದೌರ್ಜನ್ಯವೆಸಗಿದ್ದಾರೆ ಎಂದು ಆಂಡ್ರಿಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆ ವೇಳೆ ತಮ್ಮ 12 ವರ್ಷದ ಮಗನೂ ಜೊತೆಗಿದ್ದ.
ನಮ್ಮ ಜಗಳವನ್ನು ಬಿಡಿಸಲು ಆತನೂ ಮಧ್ಯ ಪ್ರವೇಶ ಮಾಡಿದ. ಆಗ ಅಡುಗೆ ಮನೆಗೆ ಹೋಗಿ, ಮುರಿದು ಹೋಗಿದ್ದ ಪ್ರೈಯಿಂಗ್ ಪ್ಯಾನ್ (Frying Pan) ತಂದು ನನ್ನ ತಲೆಗೆ ಹೊಡೆದರು. ತಲೆಗೆ ಗಾಯಗಳಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿ ಸೆಕ್ಷನ್ 324 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಹಲ್ಲೆ) ಹಾಗೂ ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕವಾಗಿ ಮಾಡಿದ ಅಪಮಾನ) ಅಡಿ ಕೇಸು ದಾಖಲಿಸಲಾಗಿದೆ.