ಹೊಸದಿಗಂತ ವರದಿ,ಬಳ್ಳಾರಿ:
ಮಾಜಿ ಉಪ ಸಭಾಪತಿ, ಹಿರಿಯ ನ್ಯಾಯವಾದಿ, ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷ ಡಾ. ಎನ್. ತಿಪ್ಪಣ್ಣ ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಬಳ್ಳಾರಿ ನಗರಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಅವರು, ತಿಪ್ಪಣ್ಣನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿ, ವಕೀಲ ವೃತ್ತಿ, ರಾಜಕಾರಣ, ಸಂಘಟನೆ, ಸಮಾಜ ಸೇವೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಮುತ್ಸದ್ದಿ ತಿಪ್ಪಣ್ಣನವರು ಎಂದು ಹೇಳಿದರು. ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ತಿಪ್ಪಣ್ಣನವರು ತಮ್ಮ ತಂದೆ ಶತಾಯುಷಿ ಶ್ರೀ ಭೀಮಣ್ಣ ಖಂಡ್ರೆ ಅವರೊಂದಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ್ದರು, ಬಸವಾದಿ ಪ್ರಮಥರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಅನ್ನ ದಾಸೋಹ, ಜ್ಞಾನ ದಾಸೋಹಕ್ಕೆ ನೆರವಾಗಿದ್ದರು.
ಹಿರಿಯ ನ್ಯಾಯವಾದಿಗಳಾಗಿ, ಸಾರ್ವಜನಿಕ ಅಭಿಯೋಜಕರಾಗಿ, ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ, ಉಪ ಸಭಾಪತಿಗಳಾಗಿ ನಾನಾ ಕ್ಷೇತ್ರದಲ್ಲಿ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅನುಪಮವಾದ್ದು ಎಂದರು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿದ್ದ ತಿಪ್ಪಣ್ಣನವರ ಆತ್ಮಕ್ಕೆ ಈಶ್ವರ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಂಧು ಮಿತ್ರರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.