January17, 2026
Saturday, January 17, 2026
spot_img

ಮಾಜಿ ಸಚಿವ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ, ಸಾವಿರಾರು ಅಭಿಮಾನಿಗಳಿಂದ ಕಂಬನಿಯ ಬೀಳ್ಕೊಡುಗೆ

ಹೊಸದಿಗಂತ ವರದಿ ಬೀದರ್:

ಶುಕ್ರವಾರ ರಾತ್ರಿ ನಿಧನರಾದ ಮಾಜಿಸಚಿವ ಭೀಮಣ್ಣ ಖಂಡ್ರೆ ಅವರ ಪಾರ್ಥೀವ ಶರೀರವನ್ನು ಶನಿವಾರ ಮಧ್ಯಾಹ್ನದ ವರೆಗೆ ಅವರ ನಿವಾಸದ ಬಳಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.

ಆನಂತರ ಮಧ್ಯಾಹ್ನ ಹೂವಿನಿಂದ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ಖಂಡ್ರೆ ಗಲ್ಲಿ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌, ಬಸ್‌ ನಿಲ್ದಾಣ, ಬೊಮ್ಮಗೊಂಡೇಶ್ವರ ವೃತ್ತ, ಹುಮನಾಬಾದ್ ರಸ್ತೆ, ಬಿಕೆಐಟಿ ಮಾರ್ಗವಾಗಿ ಚಿಕ್ಕಲಚಂದಾ ರಸ್ತೆ ಸಮೀಪದ ತೋಟದ ಮನೆಯಲ್ಲಿರುವ ಶಾಂತಿಧಾಮದ ವರೆಗೆ ಮೆರವಣಿಗೆ ನಡೆಯಿತು.

ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5ಕ್ಕೆ ವೀರಶೈವ ಲಿಂಗಾಯತ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸೇರಿದಂತೆ ವೀರಶೈವ ಲಿಂಗಾಯತ ಮಹಾಸಭಾದ ವಿವಿಧ ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಂತ್ಯಕ್ರಿಯೆಯ ವೇಳೆ ಸಚಿವ ರಹೀಂ ಖಾನ್, ಮಾಜಿ ರಾಜಶೇಖರ ಪಾಟೀಲ್ ಹುಮನಾಬಾದ್, ಹುಮನಾಬಾದ್ ಶಾಸಕ ಸಿದ್ದು ಪಾಟೀಲ್, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಎಂಎಲ್ಸಿ ಭೀಮರಾವ್ ಪಾಟೀಲ ಸೇರಿದಂತೆ ಅನೇಕ ರಾಜಕೀಯ ಮುಖಂಡರುಗಳು ಉಪಸ್ಥಿತರಿದ್ದು ಸಚಿವ ಈಶ್ವರ ಖಂಡ್ರೆ ಅವರಿಗೆ ಸಾಂತ್ವನ ಹೇಳಿ ದಿವಂಗತ ಭೀಮಣ್ಣ ಖಂಡ್ರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಿದರು.

ಅಂತ್ಯಕ್ರಿಯೆಗೆ ಭಾಲ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ “ಲೋಕನಾಯಕ ಭೀಮಣ್ಣ ಖಂಡ್ರೆ” ಅಭಿಮಾನಿಗಳು ಆಗಮಿಸಿ ತಮ್ಮ ನೆಚ್ಚಿನ ನಾಯಕನಿಗೆ ಹಸಿಗಣ್ಣಿನಿಂದ ಶ್ರದ್ಧಾಂಜಲಿ ಅರ್ಪಿಸುತ್ತ ಕೊನೆಯ ನಮನ ಸಲ್ಲಿಸಿದರು.

ಅಂತ್ಯಕ್ರಿಯೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜಿಲ್ಲಾ ಪೊಲೀಸ್ ವತಿಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Must Read

error: Content is protected !!